ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಚ್ಚಾ ಪದ ಬಳಕೆ ಮಾಡಿರುವುದನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.
ಬಿ.ವೈ.ವಿಜಯೇಂದ್ರ ಬಚ್ಚಾ, ಬಿಜೆಪಿ ರಾಜ್ಯಾಧ್ಯಕ್ಷನಾಗಲು ಯೋಗ್ಯನಲ್ಲ ಎಂದು ಶಾಸಕ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದರು. ರಮೇಶ್ ಜಾರಕಿಹೊಳಿ ಹೇಳಿಕೆಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ರಮೇಶ್ ಜಾರಕಿಹೊಳಿ, ಬಚ್ಚಾ ಎಂದು ಪದ ಬಳಕೆ ಮಾಡಿರುವುದು ತಪ್ಪು. ಅವರ ಇಂತಹ ಮಾತುಗಳನ್ನು ಒಪ್ಪಲಾಗದು ಎಂದು ಕಿಡಿಕಾರಿದ್ದಾರೆ.
ವಿಜಯೇಂದ್ರ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷರು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಈ ನಿರ್ಧಾರವನ್ನು ಎಲ್ಲರೂ ಗೌರವಿಸಬೇಕು. ಇದನ್ನು ಯಾರೂ ಮರೆಯಬಾರದು. ಶಾಸಕರೊಬ್ಬರು ಈ ರೀತಿ ಪದ ಬಳಕೆ ಮಾಡುವುದು, ಮಾತನಾಡುವುದನ್ನು ಒಪ್ಪಲಾಗದು. ಇದು ಸರಿಯಲ್ಲ ಎಂದು ಹೇಳಿದರು.