ಬೆಂಗಳೂರು: ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಫಲಾನುಭವಿಗಳ ಪಟ್ಟಿಯನ್ನು ಜುಲೈ 20 ರೊಳಗೆ ನೀಡಬೇಕು. ಫಲಾನುಭವಿಗಳ ಪಟ್ಟಿ ಸಲ್ಲಿಸದಿದ್ದರೆ ಯೋಜನೆಯ ಅನುದಾನ ಕೇಂದ್ರ ಸರ್ಕಾರಕ್ಕೆ ವಾಪಸ್ ಹೋಗಲಿದೆ. ಹೀಗಾಗಿ ಎಲ್ಲಾ ಶಾಸಕರು ಗ್ರಾಮಸಭೆಗಳ ಮೂಲಕ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಒಂದು ವಾರದೊಳಗೆ ನೀಡಬೇಕೆಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮನವಿ ಮಾಡಿದ್ದಾರೆ.
ಈ ಯೋಜನೆಗೆ ಕೇಂದ್ರ ಸರ್ಕಾರ ಶೇ. 60ರಷ್ಟು, ರಾಜ್ಯ ಸರ್ಕಾರ ಶೇ. 40 ರಷ್ಟು ಅನುದಾನ ನೀಡಲಿದ್ದು, ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಿ ಸಲ್ಲಿಸಲು ಕೇಂದ್ರ ಸರ್ಕಾರ ಎರಡು ಬಾರಿ ಗಡುವು ನೀಡಿದೆ. ಹೀಗಿದ್ದರೂ ಪಟ್ಟಿ ಅಂತಿಮಗೊಂಡಿಲ್ಲ. ಜುಲೈ 20ರೊಳಗೆ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಅಡಿಯಲ್ಲಿ ವಸತಿರಹಿತರಿಗೆ ಮನೆ ನಿರ್ಮಿಸಿ ಕೊಡುವ ಈ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ನೀಡುವಂತೆ ಕೋರಿದ್ದಾರೆ.
ರಾಜ್ಯಕ್ಕೆ 1.41 ಲಕ್ಷ ಮನೆ ಹಂಚಿಕೆಯಾಗಿದ್ದು, 63,000 ಮನೆಗಳ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಉಳಿದ 78,000 ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದೆ. ಯೋಜನೆಯಡಿ ಸಾಮಾನ್ಯ ವರ್ಗಕ್ಕೆ 1.03 ಲಕ್ಷ ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 1.20 ಲಕ್ಷ ರೂ. ಸಬ್ಸಿಡಿ ನೀಡಲಾಗುವುದು.