ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಸೆಪ್ಟೆಂಬರ್ 2022 ರವರೆಗೆ 6 ತಿಂಗಳವರೆಗೆ ವಿಸ್ತರಿಸಲಾಗಿದೆ.
ಪ್ರಧಾನಿ ಮೋದಿ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತದ ಶಕ್ತಿ ದೇಶದ ಪ್ರತಿಯೊಬ್ಬ ನಾಗರಿಕನ ಶಕ್ತಿಯಲ್ಲಿದೆ. ಈ ಶಕ್ತಿಯನ್ನು ಮತ್ತಷ್ಟು ಬಲಪಡಿಸಲು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಸೆಪ್ಟೆಂಬರ್ 2022 ರವರೆಗೆ ಇನ್ನೂ ಆರು ತಿಂಗಳ ಕಾಲ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ದೇಶದ 80 ಕೋಟಿಗೂ ಹೆಚ್ಚು ಜನರು ಮೊದಲಿನಂತೆ ಇದರ ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ(Covid 19 Pandemic) ಸಮಯದಲ್ಲಿ 80 ಕೋಟಿಗೂ ಹೆಚ್ಚು ಜನರಿಗೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ’(PMGKY)ಯನ್ನು ಜಾರಿಗೆ ತಂದಿದ್ದು, ಕಳೆದ ನವೆಂಬರ್ ನಲ್ಲಿ ಮಾರ್ಚ್ 2022ರವರೆಗೆ ವಿಸ್ತರಿಸಲಾಗಿತ್ತು.
ದೇಶದ 80 ಕೋಟಿ ಬಡವರಿಗೆ ಪ್ರತಿ ತಿಂಗಳು 5 ಕೆಜಿ ಗೋಧಿ ಅಥವಾ ಅಕ್ಕಿ ಮತ್ತು 1 ಕೆಜಿ ಬೇಳೆಕಾಳುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಯೋಜನೆ(PM Garib Kalyan Anna Yojana)ಯಡಿ ಕೇಂದ್ರ ಸರ್ಕಾರವು ಎಲ್ಲಾ ಪಡಿತರ ಚೀಟಿದಾರರಿಗೆ ಈಗಿರುವ ಪಡಿತರಕ್ಕೆ ಹೋಲಿಸಿದರೆ 2 ಪಟ್ಟು ಪಡಿತರವನ್ನು ನೀಡುತ್ತಿದೆ. ಕುಟುಂಬದಲ್ಲಿ ಪ್ರೋಟೀನ್ ಪ್ರಮಾಣವನ್ನು ಖಚಿತಪಡಿಸಿಕೊಳ್ಳಲು, ಪ್ರತಿ ತಿಂಗಳು 1 ಕೆಜಿ ಬೇಳೆಕಾಳುಗಳನ್ನು ಸಹ ನೀಡಲಾಗುತ್ತಿದೆ. ಈ ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದ್ದರೂ, ಪಡಿತರ ಚೀಟಿ ಇಲ್ಲದವರಿಗೂ PMGKAY ಪ್ರಯೋಜನವನ್ನು ನೀಡಲಾಗುತ್ತಿದೆ ಎಂದು ಹೇಳಲಾಗಿದೆ.