ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೇರ್ ಸ್ಟೈಲ್ ಬಗ್ಗೆ ವ್ಯಂಗ್ಯವಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಕಿಡಿಕಾರಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾತನಾಡಲು ಬೇರೆ ಬೇರೆ ವಿಷಯಗಳಿರುವಾಗ ಸಚಿವರ ಕೇಶ ವಿನ್ಯಾಸದ ಬಗ್ಗೆ ಮಾತನಾಡಿದ್ದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ವಿಜಯೇಂದ್ರ ಅವರೇ, ನೀವು ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಷಯ ಆಧಾರಿತವಾಗಿ ಮಾತನಾಡದೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕೇಶ ವಿನ್ಯಾಸದ ಬಗ್ಗೆ ಟೀಕೆ ಮಾಡಿದ್ದು ಎಷ್ಟು ಸರಿ? ಮಾತನಾಡಲು ವಿಷಯಗಳು ಇಲ್ಲದೇ ಇರುವಾಗ ಈ ರೀತಿ ವೈಯಕ್ತಿಕ ಟೀಕೆಗೆ ಇಳಿಯುವುದು ಸಹಜ. ವೈಯಕ್ತಿಕ ಟೀಕೆಗೆ ಇಳಿಯದೇ, ವಿಷಯಗಳ ಮೇಲೆ ಮಾತನಾಡಿ ಎಂದು ಸಲಹೆ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾತನಾಡುವುದಕ್ಕೆ ಗಂಭೀರವಾದ ವಿಚಾರಗಳಿವೆ. ರಾಜ್ಯದ ಯಾವುದೇ ಸಮಸ್ಯೆಗಳ ಬಗ್ಗೆ ಎಂದೂ ಮಾತನಾಡಿಲ್ಲ, ಬರಪರಿಹಾರದ ಬಗ್ಗೆ ಮಾತನಾಡಿಲ್ಲ. ಈಗ ಶಿಕ್ಷಣ ಸಚಿವರ ಕೇಶ ವಿನ್ಯಾಸದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಶಿಸ್ತಿನ ಪಕ್ಷ ಎಂದು ಕರೆಯಲಾಗುತ್ತದೆ. ನಿಜವಾದ ಶಿಸ್ತಿನ ಪಕ್ಷ ಕಾಂಗ್ರೆಸ್. ಏಕೆಂದರೆ ನಮ್ಮ ಪಕ್ಷದಲ್ಲಿ ಸಿಎಂ, ಡಿಸಿಎಂ, ಹಿರಿಯ ನಾಯಕರ ವಿರುದ್ಧ ಮಾತನಾಡಿದರೆ ಪಕ್ಷದಿಂದ ಕಿತ್ತು ಹಾಕಲಾಗುತ್ತದೆ. ಆದರೆ ಬಿಜೆಪಿಯಲ್ಲಿ ಈಶ್ವರಪ್ಪ, ಯತ್ನಾಳ್ ಅವರು ಬಾಯಿಗೆ ಬಂದಂತೆ ಮಾತನಾಡುತ್ತಲೇ ಇದ್ದಾರೆ ಅವರ ಯಾವುದೇ ಕ್ರಮ ಕೈಗೊಂಡಿಲ್ಲ. ಮೊದಲು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಕುರ್ಚಿಗಲ್ಲ ಧೈರ್ಯ ಇರುವುದು, ಅದರ ಮೇಲೆ ಕುಳಿತುಕೊಳ್ಳುವವರಿಗೆ ಎಂದು ಟಾಂಗ್ ನೀಡಿದ್ದಾರೆ.