ಬೆಂಗಳೂರು: ರಾಜ್ಯದಲ್ಲಿ ಚರ್ಮ ಗಂಟು ರೋಗ ಹರಡುವುದನ್ನು ತಡೆಯಲು ಇದುವರೆಗೆ 24,21,985 ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ನೀಡಲಾಗಿದೆ.
ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಈ ಬಗ್ಗೆ ಮಾಹಿತಿ ನೀಡಿದ್ದು, ಚರ್ಮಗಂಟು ರೋಗಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳ ಪರಿಶೀಲನೆ ನಡೆಸಲಾಗಿದೆ. ರಾಜ್ಯದಲ್ಲಿ ಚರ್ಮಗಂಟು ರೋಗದ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗಿದೆ. ಹಳ್ಳಿಗಳಲ್ಲಿ ಶಿಬಿರ ಆಯೋಜಿಸಿ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಚರ್ಮ ಗಂಟು ರೋಗ ಹಿನ್ನೆಲೆಯಲ್ಲಿ ಹಾಲು, ಮೊಸರು, ತುಪ್ಪ ಬಳಕೆಯಿಂದ ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಜಾನುವಾರುಗಳಲ್ಲಿ ಚರ್ಮ ರೋಗ ಕಂಡುಬಂದಿದ್ದು, ಶೇಕಡ 80 ರಷ್ಟು ಜಾನುವಾರುಗಳು ಚಿಕಿತ್ಸೆ ನಂತರ ಗುಣಮುಖವಾಗಿದೆ ಎಂದು ತಿಳಿಸಿದ್ದಾರೆ.