ಸಣ್ಣ ಉಳಿತಾಯ ಯೋಜನೆದಾರರಿಗೆ ಬೇಸರದ ಸುದ್ದಿಯಿದೆ. ಸುಕನ್ಯಾ ಸಮೃದ್ಧಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಮತ್ತು ಪಿಪಿಎಫ್ ಮೇಲಿನ ಬಡ್ಡಿದರಗಳು ಕಡಿಮೆಯಾಗುವ ಸಾಧ್ಯತೆಯಿದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಕಡಿತಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಬಡ್ಡಿದರ ಇಳಿಕೆ ಮಾಡುವುದು ಸೂಕ್ತವೆಂದು ತಜ್ಞರು ಸಲಹೆ ನೀಡಿದ್ದಾರೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ಕಡಿತವು ಸರ್ಕಾರದ ಸಾಲದ ವೆಚ್ಚವನ್ನು ಕಡಿಮೆ ಮಾಡಲಿದೆ. ಇದು ಆರ್ಥಿಕತೆಗೆ ನೆರವಾಗಲಿದೆ. ರಿಸರ್ವ್ ಬ್ಯಾಂಕ್ ಮತ್ತು ಬ್ಯಾಂಕುಗಳು ಎರಡೂ ಬಡ್ಡಿದರಗಳನ್ನು ಕಡಿತಗೊಳಿಸಲು ಬೆಂಬಲ ನೀಡಿವೆ.
5 ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಮಾರ್ಚ್ 31 ರಂದು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಕಡಿತಗೊಳಿಸಲಾಗಿತ್ತು. ಆದ್ರೆ ಮರುದಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದರು. ಜೂನ್ 30ರಂದು ಸಭೆ ನಡೆಯಲಿದೆ. ಸಭೆಯಲ್ಲಿ ಬಡ್ಡಿ ದರ ಇಳಿಕೆ ಬಗ್ಗೆ ಚರ್ಚೆ ನಡೆಯಲಿದೆ.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಶೇಕಡಾ 7.6ರಷ್ಟು ಬಡ್ಡಿ ಲಭ್ಯವಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಶೇಕಡಾ 7.4ರಷ್ಟು ಮತ್ತು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಶೇಕಡಾ 7.1 ರಷ್ಟು ಬಡ್ಡಿ ಸಿಗ್ತಿದೆ.