ಶಿಮ್ಲಾ: ಜನರಿಗೆ ಉಚಿತ ಯೋಜನೆ ನೀಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ವಾಪಸ್ ಅಭಿಯಾನ ಆರಂಭಿಸಿದೆ.
ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದಲ್ಲಿ ಹಣ ಉಳಿಸಲು ಕ್ರಮ ಕೈಗೊಳ್ಳಲಾಗಿದ್ದು, ವಿದ್ಯುತ್ ಸಬ್ಸಿಡಿ ಕೈಬಿಡಲಾಗಿದೆ. ಜನರಿಗೂ ಯೋಜನೆಗಳನ್ನು ತ್ಯಜಿಸಲು ಮನವಿ ಮಾಡಲಾಗಿದೆ. ಮುಖ್ಯಮಂತ್ರಿ ಸುಕ್ ವಿಂದ್ ಸಿಂಗ್ ಸುಖು ತಮ್ಮ ಹೆಸರಲ್ಲಿ ನೋಂದಣಿಯಾಗಿದ್ದ ವಿದ್ಯುತ್ ಸಬ್ಸಿಡಿಯನ್ನು ವಾಪಸ್ ನೀಡಿದ್ದು, ಇತರೆ ಅನುಕೂಲಸ್ಥರಿಗೂ ಸಬ್ಸಿಡಿ ಯೋಜನೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ.
ಇದರೊಂದಿಗೆ ವಿದ್ಯುತ್ ಸಬ್ಸಿಡಿ ವಾಪಸ್ ಅಭಿಯಾನ ಆರಂಭವಾಗಿದ್ದು, ತಮ್ಮ ಹೆಸರಲ್ಲಿ ನೋಂದಣಿಯಾಗಿದ್ದ ಐದು ಸಂಪರ್ಕಗಳಿಗೆ ಸಿಗುತ್ತಿದ್ದ ವಿದ್ಯುತ್ ಸಬ್ಸಿಡಿಯನ್ನು ಸುಖು ಹಿಂತಿರುಗಿಸಿದ್ದಾರೆ. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಸಬ್ಸಿಡಿ ವಾಪಸ್ ನೀಡುವಂತೆ ಜನತೆಗೆ ಮನವಿ ಮಾಡಿದ್ದಾರೆ.
ಸರ್ಕಾರ ವಿದ್ಯುತ್ ಸಬ್ಸಿಡಿಗೆ ವಾರ್ಷಿಕ 2200 ಕೋಟಿ ರೂ. ಖರ್ಚು ಮಾಡುತ್ತಿದೆ. ಇಂಧನ ಇಲಾಖೆ ನೌಕರರ ವೇತನ, ಪಿಂಚಣಿಗೆ ತಿಂಗಳಿಗೆ 200 ಕೋಟಿ ರೂ. ವೆಚ್ಚವಾಗುತ್ತದೆ. ಉಳ್ಳವರು ಸಬ್ಸಿಡಿ ವಾಪಸ್ ನೀಡಬೇಕು ಎಂದು ಸುಖು ಮನವಿ ಮಾಡಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಪ್ರದೇಶ ಸರ್ಕಾರ ಪರಿಸ್ಥಿತಿ ನಿಭಾಯಿಸಲು ಹೆಣಗಾಡುತ್ತಿದ್ದು, ಅನೇಕ ವೆಚ್ಚಗಳಿಗೆ ಕಡಿವಾಣ ಹಾಕಿದೆ. ಸಿಎಂ, ಶಾಸಕರು ಉನ್ನತ ಅಧಿಕಾರಿಗಳ ವೇತನ ಪಾವತಿಯಲ್ಲಿ ವಿಳಂಬವಾಗಿದೆ. ಕೆಲವು ಸರ್ಕಾರಿ ಹೋಟೆಲ್ ಗಳನ್ನು ಮಾರಾಟ ಮಾಡಲಾಗಿದೆ. ಅನರ್ಹ ಶಾಸಕರ ಪಿಂಚಣಿ ಸ್ಥಗಿತ ನಿರ್ಧಾರ ಪ್ರಕಟಿಸಲಾಗಿದ್ದು, ಹೋಟೆಲ್, ಉದ್ಯಮಗಳಿಗೆ ನೀಡುವ ವಿದ್ಯುತ್ ಸಬ್ಸಿಡಿ ಕಡಿತ ಮಾಡಲಾಗಿದೆ.