ಬೆಂಗಳೂರು: ರಾಜ್ಯದಲ್ಲಿ ತೀವ್ರ ವಿದ್ಯುತ್ ಕೊರತೆ ಇದ್ದರೂ ಕೈಗಾರಿಕೆಗಳಿಗೆ ಲೋಡ್ ಶೆಡ್ಡಿಂಗ್ ಮಾಡದೆ ಉದ್ಯಮ ವಲಯಕ್ಕೆ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಎಸ್ಕಾಂಗಳಿಗೆ ಸರ್ಕಾರ ಸೂಚನೆ ನೀಡಿದೆ.
ಕೈಗಾರಿಕಾ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ. ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ಭರವಸೆ ನೀಡಿದೆ. ಎಲ್ಲಾ ಎಸ್ಕಾಂಗಳಿಗೂ ಸರ್ಕಾರದಿಂದ ಕೈಗಾರಿಕಾ ಪ್ರದೇಶದಲ್ಲಿ ಲೋಡ್ ಶೆಡ್ಡಿಂಗ್ ಮಾಡದಂತೆ ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆ ಕುಸಿತವಾಗಿದ್ದು, ವಿದ್ಯುತ್ ಗೆ ಬೇಡಿಕೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿರುವುದರಿಂದ ತೀವ್ರ ಅಭಾವ ಉಂಟಾಗಿದೆ. ರಾಜ್ಯಾದ್ಯಂತ ಎಸ್ಕಾಂಗಳಿಗೆ ವಿದ್ಯುತ್ ಪೂರೈಕೆ ಮಿತಿ ನಿಗದಿ ಮಾಡಲಾಗಿದ್ದು, ಅನಧಿಕೃತ ಆರಂಭವಾಗಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ವಿದ್ಯುತ್ ಕಡಿತದಿಂದ ಕೈಗಾರಿಕೋದ್ಯಮಿಗಳು ಆತಂಕದಲ್ಲಿದ್ದು, ಕೈಗಾರಿಕೆಗಳ ಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ವ್ಯವಸ್ಥಾಪಕ ನಿರ್ದೇಶಕ ಮಹಂತೇಶ ಬೀಳಗಿ ಕೈಗಾರಿಕಾ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ನಿರಂತರ ವಿದ್ಯುತ್ ಪೂರೈಸುವ ಭರವಸೆ ನೀಡಿದ್ದಾರೆ. ಉಳಿದ ಎಸ್ಕಾಂಗಳಲ್ಲಿಯೂ ಕೈಗಾರಿಕಾ ಪ್ರದೇಶಗಳಲ್ಲಿ ಮಾಡದಂತೆ ಸೂಚನೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.