ವಿಮಾನ ನಿಲ್ದಾಣಗಳಲ್ಲಿ ನೀವು ಎಂದಾದರೂ ವಸ್ತುಗಳನ್ನು ಕಳೆದುಕೊಂಡಿದ್ದರೆ ಅವು ಮರಳಿ ಸಿಗುವುದು ಕನಸಿನ ಮಾತೇ. ಆದರೆ ಇಲ್ಲೊಂದು ಅಪರೂಪದ ಘಟನೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಅತ್ಯಂತ ಭಾವನಾತ್ಮಕ ಸಂಬಂಧ ಹೊಂದಿರುವ ಕೈಗಡಿಯಾರವನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಮರಳಿ ಪಡೆದಿರುವ ಕುತೂಹಲದ ಘಟನೆ ನಡೆದಿದೆ.
ಆಂಡರ್ಸ್ ಆಂಡರ್ಸನ್ ಎನ್ನುವವರು ಈ ವಿಷಯವನ್ನು ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಗೆ ತಮ್ಮ ಕೈಗಡಿಯಾರವನ್ನು ಮರಳಿ ಪಡೆಯಲು ಸಹಾಯ ಮಾಡಿದರು ಎಂಬ ಬಗ್ಗೆ ವಿವರಿಸಿದ್ದು, ಇದು ಹೃದಯಸ್ಪರ್ಶಿ ಕಥೆಯಾಗಿದೆ ಎಂದಿದ್ದಾರೆ.
ಆಂಡರ್ಸನ್ ಟ್ರಿಗ್‌ನಲ್ಲಿ ಬಿಸಿನೆಸ್ ಟೆಕ್ನಾಲಜಿ ಎಂಟರ್‌ಪ್ರೈಸ್ ಸೊಲ್ಯೂಷನ್ಸ್‌ನ ನಿರ್ದೇಶಕ ಮತ್ತು ಮುಖ್ಯಸ್ಥರಾಗಿದ್ದಾರೆ, ಫ್ರಾಂಕ್‌ಫರ್ಟ್‌ಗೆ ಹೋಗುವ ಮಾರ್ಗದಲ್ಲಿ ತಮ್ಮ ಗಡಿಯಾರವನ್ನು ಕಳೆದುಕೊಂಡಿದ್ದರು. ಈ ಗಡಿಯಾರವನ್ನು ಅವರಿಗೆ ಅವರ ಅಜ್ಜ ಜನ್ಮ ದಿನಕ್ಕೆ ನೀಡಿದ್ದರು. ಅಜ್ಜ ಮೃತಪಟ್ಟ ಬಳಿಕ ಈ ಗಡಿಯಾರವನ್ನು ಅವರು ತುಂಬಾ ಪ್ರೀತಿಸುತ್ತಿದ್ದರು. ಆದರೆ ಅದು ಕಳೆದು ಹೋಗಿತ್ತು.
ಈ ಹಿನ್ನೆಲೆಯಲ್ಲಿ ಅವರು, ತಕ್ಷಣ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಮೇಲ್ ಬರೆದರು. ‘ನನ್ನ ಮೇಲ್ ಕಳುಹಿಸಿದ ತಕ್ಷಣ (20 ನಿಮಿಷಗಳು) ಬೆಂಗಳೂರು ಏರ್‌ಪೋರ್ಟ್ ಸಿಬ್ಬಂದಿ ಕಾರ್ಯಪ್ರವೃತ್ತರಾದರು. ಅಲ್ಲಿಂದ ನನಗೆ ವಾಪಸ್ ಮೇಲ್ ಬಂದು ಗಡಿಯಾರ ಹುಡುಕಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿತ್ತು. ಆದರೂ ನನಗೆ ಗಡಿಯಾರ ಸಿಗುತ್ತದೆ ಎನ್ನುವ ನಂಬಿಕೆ ಇರಲಿಲ್ಲ. ಆದರೆ ನವೆಂಬರ್ 27 ರ ಬೆಳಿಗ್ಗೆ, ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್ ಲಾಸ್ಟ್ ಆ್ಯಂಡ್ ಫೌಂಡ್‌ನಿಂದ ಇ-ಮೇಲ್ ಪಡೆದೆ. ಅದರಲ್ಲಿ ಗಡಿಯಾರ ಸಿಕ್ಕಿರುವುದಾಗಿ ತಿಳಿಸಲಾಗಿತ್ತು’ ಎಂದು ಬರೆದುಕೊಂಡಿದ್ದಾರೆ.