ರಾಜ್ಯದ ಹಲವೆಡೆ ಅನಿಯಮಿತ ಲೋಡ್ ಶೆಡ್ಡಿಂಗ್ ನಿಂದಾಗಿ ಭಾರಿ ಸಮಸ್ಯೆ ಎದುರಾಗಿದೆ. ಆಗಾಗ ಕರೆಂಟ್ ಕೈಕೊಡುತ್ತಿದ್ದು, ಬೆಳೆಗಳಿಗೆ ನೀರು ಹಾಯಿಸಲು ರೈತರು ಕಾದುಕಾದು ಸುಸ್ತಾಗಿದ್ದಾರೆ.
ದುರಸ್ತಿ ಸೇರಿದಂತೆ ನಾನಾ ರೀತಿಯ ನೆಪವೊಡ್ಡಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗಂಟೆಗಟ್ಟಲೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಬೇಸಿಗೆಯ ಸೆಖೆ, ಬೇಗೆಯಿಂದ ಜನ ತತ್ತರಿಸುವಂತಾಗಿದೆ. ಅಲ್ಲದೆ, 7 ಗಂಟೆ ಬದಲಿಗೆ 5 ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ರೈತರಿಗೆ ಸಮಸ್ಯೆ ಎದುರಾಗಿದೆ.
ಬಿಸಿಲ ಬೇಗೆ ಹೆಚ್ಚಾಗಿರುವುದರಿಂದ ವಿದ್ಯುತ್ ಗೆ ಬೇಡಿಕೆ ಜಾಸ್ತಿಯಾಗಿದೆ. ಪದೇಪದೇ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಮುನ್ಸೂಚನೆ ನೀಡದೆ ಅಘೋಷಿತ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದರಿಂದ ಕೆಲವು ಕಡೆ ಕರೆಂಟ್ ಯಾವಾಗ ಬರುತ್ತೆ ಎಂದು ಕಾಯುವ ಪರಿಸ್ಥಿತಿ ಇದೆ. ಬಹುತೇಕ ಜಿಲ್ಲೆಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆರಂಭವಾಗಿದ್ದು, ಬೇಸಿಗೆ ಆರಂಭದಲ್ಲಿ ಹೀಗಾದರೆ ಮುಂದಿನ ದಿನಗಳು ಹೇಗೆ ಎಂಬ ಚಿಂತೆ ಎದುರಾಗಿದೆ ಎಂದು ಹೇಳಲಾಗಿದೆ.