ಬೆಂಗಳೂರು: 2011ರ ಜನವರಿಯಿಂದ 2017ರ ಜುಲೈ ವರೆಗೆ ಪೌರ ಕಾರ್ಮಿಕರಿಗೆ ಪಾವತಿಸಬೇಕಿದ್ದ ಭವಿಷ್ಯ ನಿಧಿ (PF)ಯನ್ನು 8 ವಾರಗಳಲ್ಲಿ ಪಾವತಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಸೂಚಿಸಿದೆ.
ಒಟ್ಟು 90,18,89,719 ರೂಪಾಯಿ ಭವಿಷ್ಯ ನಿಧಿ ಬಾಕಿ ಇದ್ದು, ಈ ಹಣವನ್ನು 8 ವಾರಗಳಲ್ಲಿ ಪಾವತಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಬಿಬಿಎಂಪಿ ಪೌರ ಕಾರ್ಮಿಕರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಸೂಚನೆ ನೀಡಿದೆ. ಉದ್ಯೋಗದಾತರ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯಿದೆ, 1952ರ ಸೆಕ್ಷನ್ 7Aಗೆ ಅನುಗುಣವಾಗಿ ಶೇ 12 ದರದಲ್ಲಿ ಸರಳ ಬಡ್ಡಿಯೊಂದಿಗೆ ಮೊತ್ತವನ್ನು ಠೇವಣಿ ಮಾಡುವಂತೆ 2017ರ ಅಕ್ಟೋಬರ್ 26ರಂದು ಬೆಂಗಳೂರಿನ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಆದೇಶವನ್ನು ಹೊರಡಿಸಿದ್ದರು. ಸಂಘವು ಆದೇಶದ ಅನುಷ್ಠಾನಕ್ಕೆ ನಿರ್ದೇಶನಗಳನ್ನು ಕೋರಿ ಅರ್ಜಿ ಸಲ್ಲಿಸಿತ್ತು ಈ ಮಧ್ಯೆ ಪ್ರಾದೇಶಿಕ ಭ್ಯವಿಷ್ಯನಿಧಿ ಆಯುಕ್ತರ ಆದೇಶ ಪ್ರಶ್ನಿಸಿ ಬಿಬಿಎಂಪಿ ಕೋರ್ಟ್ ಮೆಟ್ಟಿಲೇರಿತ್ತು.