ಬೆಂಗಳೂರು: ರಾಜ್ಯ ಸರ್ಕಾರ ಬರ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ನಡೆಯಬೇಕಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮಂಡ್ಯದಲ್ಲಿ ಜನವರಿಯಲ್ಲಿ ನಡೆಯಬೇಕಿದ್ದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮುಂದೂಡಲಾಗಿದೆ. ಪರಿಸ್ಥಿತಿ ಗಮನಿಸಿ ಫೆಬ್ರವರಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ಸರ್ಕಾರ ಬರ ಘೋಷಣೆ ಮಾಡಿದೆ. ಇಂತಹ ಸಂದರ್ಭದಲ್ಲಿ ಅಕ್ಷರ ಜಾತ್ರೆ ನಡೆಸುವುದು ಸಮರ್ಪಕವಲ್ಲ. ಅದ್ದೂರಿ ಸಮ್ಮೇಳನಗಳಿಗೆ ಕಡಿವಾಣ ಹಾಕಲು ಪರಿಷತ್ ತೀರ್ಮಾನ ಕೈಗೊಂಡಿದ್ದು, ನಾಡಿನ ರೈತರು ಸಂಕಷ್ಟದಲ್ಲಿರುವಾಗ ಸಂತಸ ಆಚರಿಸುವುದು ಸರಿಯಲ್ಲ ಎಂದು ಸಮ್ಮೇಳನ ಮುಂದೂಡಿರುವುದಾಗಿ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳು ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿವೆ. ಬುಧವಾರ ಹಂಪಿ ಉತ್ಸವ ಮುಂದೂಡಿ ಸರ್ಕಾರ ಆದೇಶಿಸಿದ್ದು, ಈಗ ಮಂಡ್ಯ ಸಾಹಿತ್ಯ ಸಮ್ಮೇಳನವನ್ನು ಕೂಡ ಮುಂದೂಡಲಾಗಿದೆ.