ಬೆಂಗಳೂರು: ಬೀದರ್ ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ- ಕಾಂಗ್ರೆಸ್ ನಾಯಕರ ನಡುವೆ ಆರೋಪ -ಪ್ರತ್ಯಾರೋಪ ಮುಂದುವರೆದಿದೆ.
ಈ ನಡುವೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಪೋಸ್ಟರ್ ಅಂಟಿಸಿದ 13 ಬಿಜೆಪಿ ನಾಯಕರ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರೇಸ್ ಕೋರ್ಸ್ ರಸ್ತೆಯ ಸಾರ್ವಜನಿಕ ಶೌಚಾಲಯದ ಗೋಡೆಗೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಿ, ಸೂಸೈಡ್ ಭಾಗ್ಯ, ಸುಫಾರಿ ಭಾಗ್ಯ ನೀಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎನ್ನುವ ಪೋಸ್ಟರ್ ಅಂಟಿಸಲಾಗಿತ್ತು. ಹೀಗೆ ಪೋಸ್ಟರ್ ಅಂಟಿಸಿದ ಬಿಜೆಪಿ ನಾಯಕರು ನಗರದ ಸೌಂದರ್ಯಕ್ಕೆ ಧಕ್ಕೆ ತಂದಿದ್ದಾರೆ. ಅಕ್ರಮವಾಗಿ ರಸ್ತೆಯಲ್ಲಿ ಸೇರಿ ಸಾರ್ವಜನಿಕರಿಗೆ ಅಡ್ಡಿ ಉಂಟು ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಸದಸ್ಯರಾದ ಸಿ.ಟಿ. ರವಿ, ಎನ್. ರವಿಕುಮಾರ್ ಸೇರಿ 13 ಬಿಜೆಪಿ ನಾಯಕರ ವಿರುದ್ಧ ಪಿಎಸ್ಐ ಶಶಿಧರ ವಣ್ಣೂರ ಅವರ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ.