ಬೆಂಗಳೂರು: ಅಂಚೆ ಮತದಾನಕ್ಕೆ ಅವಕಾಶ ಕೋರಿದ ಹಲವಾರು ನೌಕರರ ಅರ್ಜಿಗಳು ತಿರಸ್ಕೃತಗೊಂಡಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರರು, ಮಾಧ್ಯಮ ಪ್ರತಿನಿಧಿಗಳು ಗೈರು ಹಾಜರಿ ಮತದಾನ ವ್ಯವಸ್ಥೆ ಅಡಿಯಲ್ಲಿ ಅಂಚೆ ಮತದಾನಕ್ಕೆ ಅವಕಾಶ ಕೋರಿ ಸಲ್ಲಿಸಿದ ಹಲವು ಅರ್ಜಿಗಳು ತಿರಸ್ಕೃತಗೊಂಡಿವೆ.
ಅರ್ಜಿ ಸಲ್ಲಿಕೆಗೆ ಏಪ್ರಿಲ್ 17 ಕೊನೆಯ ದಿನವಾಗಿತ್ತು. ಹಲವಾರು ಮಂದಿ ಸಲ್ಲಿಸಿದ ಅರ್ಜಿಗಳನ್ನು ಎಲೆಕ್ಟಾನ್ ಅಪ್ಲಿಕೇಶನ್ ನಲ್ಲಿ ಸಕಾಲಕ್ಕೆ ನೋಂದಾಯಿಸಲು ಸಾಧ್ಯವಾಗದ ಕಾರಣ ನೀಡಿ ತಿರಸ್ಕರಿಸಲಾಗಿದೆ. ಅಗತ್ಯ ಸೇವೆ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ನೌಕರರು, ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿಗಳು ಮತ್ತು ಸಿಬ್ಬಂದಿ, ಭದ್ರತಾ ಸಿಬ್ಬಂದಿ ಚುನಾವಣಾ ಪ್ರಕ್ರಿಯೆ ವರದಿ ಮಾಡುವ ಮಾನ್ಯತೆ ಪಡೆದ ಪತ್ರಕರ್ತರಿಗೆ ಈ ಬಾರಿ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದ್ದು, ಸಕಾಲಕ್ಕೆ ಅರ್ಜಿ ಸಲ್ಲಿಸಿದ್ದರೂ ಎಲೆಕ್ಟಾನ್ ಅಪ್ಲಿಕೇಶನ್ ನಲ್ಲಿ ನೋಂದಾಯಿಸಲು ಸಾಧ್ಯವಾಗದ ಕಾರಣ ನೀಡಿ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅಂಚೆ ಮತದಾನಕ್ಕೆ ಅವಕಾಶ ಕೋರಿ ಏಪ್ರಿಲ್ 14ರ ವರೆಗೆ ಸಲ್ಲಿಕೆಯಾದ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಲೋಪವಾಗಿದ್ದಲ್ಲಿ ಅರ್ಜಿದಾರರು ಆಯಾ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.