
ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಚೆ ನೌಕರರು ಜುಲೈ 3ರ ಸೋಮವಾರ ಪ್ರತಿಭಟನೆ ಕೈಗೊಂಡಿದ್ದು, ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಎರಡು ಮತ್ತು ನಾಲ್ಕನೇ ಶನಿವಾರ ರಜೆ ನೀಡಬೇಕು, ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಅಂಚೆ ನೌಕರರ ಸಂಘದಿಂದ ಅರಮನೆ ರಸ್ತೆಯ ವಲಯ ಕಚೇರಿ ಎದುರು ಸೋಮವಾರ ಧರಣಿ ನಡೆಸಲಾಗುವುದು.
ರಾಜ್ಯದ ಎಲ್ಲಾ ವಲಯ ಪದಾಧಿಕಾರಿಗಳು, ವಿಭಾಗಿಯ ಕಾರ್ಯದರ್ಶಿಗಳು ಕೆಲಸಕ್ಕೆ ರಜೆ ಹಾಕಿ ಕಡ್ಡಾಯವಾಗಿ ಹೋರಾಟದಲ್ಲಿ ಭಾಗವಹಿಸಬೇಕು ಎಂದು ವಲಯ ಕಾರ್ಯದರ್ಶಿ ಪಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ. ಧರಣಿಯಿಂದಾಗಿ ನಾಳೆ ಅಂಚೆ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಬಾಕಿ ಇರುವ ಪ್ರಯಾಣ ಭತ್ಯೆ, ವೈದ್ಯಕೀಯ ಬಿಲ್ ಶೀಘ್ರ ಪಾವತಿಸಬೇಕು. ಬ್ಯಾಂಕ್ ಗಳಿಗೆ ಇರುವಂತೆ ಎರಡನೇ ಮತ್ತು ನಾಲ್ಕನೇ ಶನಿವಾರ ಎಲ್ಲಾ ಅಂಚೆ ಕಚೇರಿಗಳಿಗೆ ರಜೆ ಘೋಷಿಸಬೇಕು. ರಿಜಿಸ್ಟರ್ಡ್, ಸ್ಪೀಡ್ ಪೋಸ್ಟ್ ಪತ್ರಗಳನ್ನು ಸಂಗ್ರಹಿಸಲು, ಬುಕ್ ಮಾಡಲು ಪೋಸ್ಟ್ ಮ್ಯಾನ್ ಗಳಿಗೆ ಹ್ಯಾಂಡಲ್ ಡಿವೈಸ್ ಒದಗಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗಿದೆ.