ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ (ಐಪಿಪಿಬಿ) ಮತ್ತು ಅಂಚೆ ಇಲಾಖೆಯು ಗ್ರಾಮೀಣ ಭಾಗದ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಮತ್ತು ಅವರಿಗೆ ವಿಮೆ ಸೇವೆ ಒದಗಿಸಲು ಬಜಾಜ್ ಅಲಯನ್ಸ್ ಜೀವ ವಿಮೆ ಕಂಪನಿ ಜತೆಗೆ ಕೈಜೋಡಿಸಿದೆ.
ಅಂಚೆ ಇಲಾಖೆಯ ಖಾತೆದಾರರಿಗೆ ಇನ್ಮುಂದೆ ಬಜಾಜ್ ಅಲಯನ್ಸ್ ಕಂಪನಿಯ ಟರ್ಮ್ ವಿಮೆ ಹಾಗೂ ವಾರ್ಷಿಕ ವಿಮೆಯ ಯೋಜನೆಗಳು ಅಂಚೆ ಇಲಾಖೆಯ ಮೂಲಕವೇ ದೊರಕಲಿದೆ. ಸುಮಾರು 650 ಶಾಖೆಗಳು, 1.36 ಲಕ್ಷ ಬ್ಯಾಂಕಿಂಗ್ ಲಭ್ಯತೆ ಕೇಂದ್ರಗಳನ್ನು ಹೊಂದಿರುವ ಐಪಿಪಿಬಿಯ ವಿಸ್ತೃತ ಜಾಲದ ಲಾಭವನ್ನು ಕೂಡ ಬಜಾಜ್ ಅಲಯನ್ಸ್ ಕಂಪನಿ ಬಳಸಿಕೊಳ್ಳಲು ಮುಂದಾಗಿದೆ.
ಬಜಾಜ್ ಅಲಯನ್ಸ್ ಲೈಫ್ ಸ್ಮಾರ್ಟ್ ಪ್ರೊಟೆಕ್ಟ್ ಗೋಲ್ ಮತ್ತು ಬಜಾಜ್ ಅಲಯನ್ಸ್ ಲೈಫ್ ಗ್ಯಾರೆಂಟೀಡ್ ಪೆನ್ಷನ್ ಗೋಲ್ ಎಂಬ ಎರಡು ಬಹುಪಯೋಗಿ ವಿಮಾ ಯೋಜನೆಗಳ ಪಾಲಿಸಿಗಳನ್ನು ಅಂಚೆ ಇಲಾಖೆ ಗ್ರಾಹಕರು ಪಡೆಯಲು ಅವಕಾಶವಿದೆ.
ಇದರಲ್ಲಿ ಸ್ಮಾರ್ಟ್ ಗೋಲ್ ಪ್ರೊಟೆಕ್ಟ್ ಗೋಲ್ ಟರ್ಮ್ ವಿಮೆ ಆಗಿದೆ. ವಿಮೆ ಹೊಂದಿರುವವರು ಮೃತಪಟ್ಟ ಕೂಡಲೇ ಅವರ ಕುಟುಂಬಕ್ಕೆ ಆರ್ಥಿಕ ನೆರವಿಗೆ ಈ ಯೋಜನೆ ಧಾವಿಸಲಿದೆ. ಇನ್ನೊಂದೆಡೆ, ಪೆನ್ಷನ್ ಗೋಲ್ ಯೋಜನೆ ಅಡಿಯಲ್ಲಿ ನಿಶ್ಚಿತ ಮತ್ತು ಖಾತ್ರಿಯಾದ ಆದಾಯವು ವಿಮೆ ಪಡೆದವರು ಬದುಕಿರುವ ತನಕ ಸಿಗುತ್ತಲೇ ಇರಲಿದೆ.
ಇನ್ನೂ ಕೋವಿಡ್ ಲಸಿಕೆ ಪಡೆದಿಲ್ಲವೇ…? ಇನ್ಯಾಕೆ ತಡ ಇಲ್ಲಿದೆ ಬಂಪರ್
ಈ ಎರಡು ವಿಮೆ ಯೋಜನೆಗಳ ಜತೆಗೆ ಅಂಚೆ ಇಲಾಖೆಯು ತನ್ನ ಪೋಸ್ಟಲ್ ಜೀವವಿಮೆ ಮತ್ತು ಗ್ರಾಮೀಣ ಅಂಚೆ ಜೀವವಿಮೆ ಯೋಜನೆಗಳ ಪಾಲಿಸಿಗಳನ್ನು ಮಾರಾಟ ಮಾಡುವುದನ್ನು ಕೂಡ ಮುಂದುವರಿಸಲಿದೆ. ಈ ಬಗ್ಗೆ ಭಾರಿ ವಿಶ್ವಾಸ ವ್ಯಕ್ತಪಡಿಸಿರುವ ಐಪಿಪಿಬಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಜೆ. ವೆಂಕಟರಾಮು ಅವರು, ಖಾಸಗಿ ವಿಮಾ ಕಂಪನಿ ಜತೆಗಿನ ಸಹಭಾಗಿತ್ವವು ಹೊಸ ಮೈಲಿಗಲ್ಲು ಸೃಷ್ಟಿಸಲಿದೆ. ದೇಶದ ಮೂಲೆಮೂಲೆಗಳಿಗೂ ವ್ಯಾಪಿಸಿರುವ ತಮ್ಮ ಅಂಚೆ ಇಲಾಖೆಯ ಜಾಲದ ಲಾಭವು ವಿಮೆ ಕಂಪನಿಗೂ ಸಿಗಲಿದೆ ಎಂದಿದ್ದಾರೆ.