ಅಂಚೆ ಕಚೇರಿ ಯೋಜನೆಗಳು ಸರ್ಕಾರದ ಬೆಂಬಲವನ್ನು ಹೊಂದಿರುವುದರಿಂದ ಅವುಗಳು ವಿಶ್ವಾಸಾರ್ಹವಾಗಿವೆ. ಅಂಚೆ ಕಚೇರಿಯು ಒಟ್ಟು ಮೊತ್ತದ ಹೂಡಿಕೆ ಯೋಜನೆಗಳನ್ನು ಕೂಡ ಹೊಸದಾಗಿ ನೀಡುತ್ತಿದೆ. ಇದರ ಅಡಿಯಲ್ಲಿ ಒಬ್ಬ ವ್ಯಕ್ತಿ ಒಂದೇ ಬಾರಿಗೆ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಿದರೆ ಮಾಸಿಕ ಗರಿಷ್ಠ ಆದಾಯವನ್ನು ಗಳಿಸಬಹುದಾಗಿದೆ.
ಜನವರಿ-ಮಾರ್ಚ್ 2023 ರ ಬಡ್ಡಿ ದರವನ್ನು ಶೇಕಡಾ 7.1 ಕ್ಕೆ ನಿಗದಿಪಡಿಸಲಾಗಿದೆ. ಪೋಸ್ಟ್ ಆಫೀಸ್ ಲಾಕ್-ಇನ್ ಅವಧಿಯು 5 ವರ್ಷಗಳು. ನೀವು ಹೂಡಿಕೆ ಮಾಡಿದ ಮೊತ್ತವನ್ನು ಮುಕ್ತಾಯದ ನಂತರ ಹಿಂಪಡೆಯಬಹುದು ಅಥವಾ ಮರುಹೂಡಿಕೆ ಮಾಡಬಹುದಾಗಿದೆ.
ಈ ಯೋಜನೆಯಲ್ಲಿ ಗರಿಷ್ಠ ಹೂಡಿಕೆ ಮಿತಿಯನ್ನು ಒಂದೇ ಖಾತೆಗೆ ರೂ. 4.5 ಲಕ್ಷದಿಂದ ರೂ. 9 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಜಂಟಿ ಖಾತೆಗೆ ರೂ. 15 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಕುರಿತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣ 2023 ರಲ್ಲಿ ಘೋಷಿಸಿದ್ದರು. ಇದರ ಬಳಿಕ ಈಗ ಜಂಟಿ ಖಾತೆಯಲ್ಲಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದ ನಂತರ ಬಡ್ಡಿಯ ರೂಪದಲ್ಲಿ ಸುಮಾರು 9,000 (ರೂ. 8,875) ಮಾಸಿಕ ಆದಾಯವನ್ನು ಗಳಿಸಬಹುದಾಗಿದೆ. ಇದರ ಅಡಿಯಲ್ಲಿ, ಎಲ್ಲಾ ಜಂಟಿ ಹೊಂದಿರುವವರು ಹೂಡಿಕೆಯಲ್ಲಿ ಸಮಾನ ಪಾಲನ್ನು ಹೊಂದಿರುತ್ತಾರೆ.
ಒಂದೇ ಖಾತೆಯಿದ್ದರೆ 9 ಲಕ್ಷ ರೂ.ಗಳ ಠೇವಣಿ ಇಟ್ಟರೆ ಮಾಸಿಕ 5,325 ರೂ ಬಡ್ಡಿ ಆದಾಯವನ್ನು ಪಡೆಯಬಹುದಾಗಿದೆ. ಈ ಯೋಜನೆಯಡಿ ಯಾವುದೇ ವಯಸ್ಕರು ಖಾತೆಯನ್ನು ತೆರೆಯಬಹುದು. 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕನು ಅವನ/ಅವಳ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಸ್ಥಿರ-ಆದಾಯ ಯೋಜನೆಯಾಗಿ, ನೀವು ಹೂಡಿಕೆ ಮಾಡಿದ ಹಣವು ಮಾರುಕಟ್ಟೆಯ ಅಪಾಯಗಳಿಗೆ ಒಳಪಡುವುದಿಲ್ಲ ಮತ್ತು ಸಾಕಷ್ಟು ಸುರಕ್ಷಿತವಾಗಿದೆ.