ಹೂಡಿಕೆದಾರರಿಗೆ ಅತ್ಯಂತ ಪ್ರಭಾವಶಾಲಿ ಆದಾಯವನ್ನು ಒದಗಿಸಬಲ್ಲ ವಿವಿಧ ಯೋಜನೆಗಳನ್ನು ಅಂಚೆ ಕಚೇರಿ ನೀಡುತ್ತದೆ. ಭಾರತದಲ್ಲಿ ಅನೇಕರು ತಮ್ಮ ಭವಿಷ್ಯದ ದೃಷ್ಟಿಯಿಂದ ವಿಶೇಷವಾಗಿ ನಿವೃತ್ತಿಯ ಹಣವನ್ನು ಉಳಿಸಲು ಬಂದಾಗ ಈ ಸರ್ಕಾರೀ ಇಲಾಖೆಯನ್ನು ಹೆಚ್ಚಾಗಿ ನಂಬುತ್ತಾರೆ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS) ಅಂತಹ ಒಂದು ಯೋಜನೆಯಾಗಿದ್ದು, ಹೂಡಿಕೆದಾರರಿಗೆ ಪ್ರತಿ ತಿಂಗಳು ಪಿಂಚಣಿ ಪಡೆಯುವ ಅವಕಾಶ ಕಲ್ಪಿಸಿದೆ. ಈ ಪಾಲಿಸಿಯು ಸಣ್ಣ ಉಳಿತಾಯ ಹೂಡಿಕೆ ಯೋಜನೆಯಾಗಿದ್ದು, ಖಾತರಿಪಡಿಸಿದ ಮಾಸಿಕ ಆದಾಯ ಸೇರಿದಂತೆ ಹೂಡಿಕೆದಾರರಿಗೆ ಒಳ್ಳೆಯ ಆದಾಯವನ್ನು ನೀಡುತ್ತದೆ.
ತಮ್ಮ ಹೂಡಿಕೆಯ ಮೇಲೆ ನಿಶ್ಚಿತ ಮಾಸಿಕ ಆದಾಯದ ಅಗತ್ಯವಿರುವ ಸಾಂಪ್ರದಾಯಿಕ ಹೂಡಿಕೆದಾರರು ಮತ್ತು ಹಿರಿಯ ನಾಗರಿಕರಿಗೆ ಮೇಲ್ಕಂಡ ಯೋಜನೆಯು ಸೂಕ್ತವಾಗಿರುತ್ತದೆ. ಹೂಡಿಕೆದಾರರು ಕನಿಷ್ಟ ಹೂಡಿಕೆಯೊಂದಿಗೆ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ತಮ್ಮ ಖಾತೆಯನ್ನು ತೆರೆಯಬಹುದು. ಉದಾಹರಣೆಗೆ, ಹೂಡಿಕೆದಾರರು ಕನಿಷ್ಠ ರೂ 1,000 ಹೂಡಿಕೆ ಮಾಡುವ ಮೂಲಕ ಎಂಐಎಸ್ ಪಾಲಿಸಿಯಲ್ಲಿ ಖಾತೆಯನ್ನು ತೆರೆಯಬಹುದು.
ಈ ಯೋಜನೆಯು ಕಡಿಮೆ-ರಿಸ್ಕ್‌ನ ಹೂಡಿಕೆಯ ಆಯ್ಕೆಯಾಗಿದೆ. ಹೂಡಿಕೆದಾರರು ತಮ್ಮ ಹಣವನ್ನು 5 ವರ್ಷಗಳ ಅವಧಿಗೆ ಯೋಜನೆಯಲ್ಲಿ ಹಾಕಬಹುದು. ಆದಾಗ್ಯೂ, ನೀವು ಬಯಸಿದರೆ ನೀವು ಯೋಜನೆಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಬಹುದು. ನೀವು ಈ ಪಾಲಿಸಿಯಲ್ಲಿ ಹೂಡಿಕೆ ಮೊತ್ತವನ್ನು ಹೆಚ್ಚಿಸಬಹುದು.
ಪ್ರಸ್ತುತ ಈ ಯೋಜನೆಯಲ್ಲಿ ವಾರ್ಷಿಕ 6.6 ಶೇಕಡಾ ಬಡ್ಡಿದರವನ್ನು ಅಂಚೆ ಕಚೇರಿ ನೀಡುತ್ತಿದೆ. ಒಂದೇ ರೀತಿಯ ಮೆಚ್ಯೂರಿಟಿ ಅವಧಿಗಳೊಂದಿಗೆ ಹಲವಾರು ಸ್ಥಿರ ಠೇವಣಿಗಳಿಗಿಂತ ಈ ಬಡ್ಡಿ ದರವು ಉತ್ತಮವಾಗಿದೆ.
ಈ ಹೂಡಿಕೆಯ ಆಯ್ಕೆಯು ಮಾರುಕಟ್ಟೆಗಳಿಗೆ ಸಂಬಂಧಿಸಿಲ್ಲ ಎಂಬ ಅಂಶವು ಅದನ್ನು ಇನ್ನಷ್ಟು ಸುರಕ್ಷಿತ ಮತ್ತು ಕಡಿಮೆ-ರಿಸ್ಕ್‌ನ ಆಯ್ಕೆಯನ್ನಾಗಿ ಮಾಡುತ್ತದೆ, ಈ ಯೋಜನೆ ಹಿರಿಯ ನಾಗರಿಕರು ಮೆಚ್ಚುವಂಥದ್ದಾಗಿದೆ.
ಆದಾಗ್ಯೂ, ಈ ಯೋಜನೆಯಡಿ ಹೂಡಿಕೆಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿವೆ. ಅಲ್ಲದೆ, ಹೂಡಿಕೆದಾರರು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ.