ಬೆಂಗಳೂರು: ಜನನ ಹಾಗೂ ಮರಣ ಪ್ರಮಾಣ ಪತ್ರಗಳಿಗೆ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡಬೇಕಿಲ್ಲ. ಮನೆ ಬಾಗಿಲಿಗೆ ಸ್ಪೀಡ್ ಪೋಸ್ಟ್ ನಲ್ಲಿ ಜನನ, ಮರಣ ಪ್ರಮಾಣ ಪತ್ರ ತಲುಪಿಸಲು ಕಂದಾಯ ಇಲಾಖೆ, ಅಂಚೆ ಇಲಾಖೆ ಕ್ರಮ ಕೈಗೊಂಡಿವೆ.
ಕಂದಾಯ ಇಲಾಖೆ ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಜನನ, ಮರಣ ಪ್ರಮಾಣ ಪತ್ರಗಳಿಗೆ ನಾಡಕಚೇರಿ, ಆಸ್ಪತ್ರೆಗಳಿಗೆ ಅಲೆದಾಡುವುದನ್ನು ತಪ್ಪಿಸಿ ಮನೆ ಬಾಗಿಲಿಗೆ ಜನನ, ಮರಣ ಪ್ರಮಾಣ ಪತ್ರಗಳನ್ನು ಸ್ಪೀಡ್ ಪೋಸ್ಟ್ ನಲ್ಲಿ ತಲುಪಿಸಲಾಗುವುದು.
ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಮನೆ ಬಾಗಿಲಿಗೆ ಪ್ರಮಾಣ ಪತ್ರ ಯೋಜನೆ ಜಾರಿಗೆ ತಂದಿದ್ದು, ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಂಚೆ ಇಲಾಖೆ ಯೋಜನೆ ವಿಸ್ತರಿಸಲು ಮುಂದಾಗಿದೆ. ಜನನ, ಮರಣದ ವೇಳೆಯಲ್ಲಿ ಆಸ್ಪತ್ರೆಗಳು ಪೋಷಕರಿಂದ ಅರ್ಜಿ ಪಡೆದು ಸಂಬಂಧಿಸಿದ ಇಲಾಖೆಗೆ ಕಳುಹಿಸುತ್ತವೆ. ಗ್ರಾಮೀಣ ಭಾಗದಲ್ಲಿ ಜನನ, ಮರಣವಾದ ಸಂದರ್ಭದಲ್ಲಿ ನಾಡಕಚೇರಿ, ತಾಲೂಕು ಕಚೇರಿ, ಪುರಸಭೆಗಳ ಮೂಲಕ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿ ಇದನ್ನು ಪಡೆದುಕೊಳ್ಳಲು ಜನ ಕಚೇರಿಗಳಿಗೆ ಅಲೆದಾಡಬೇಕಿದೆ.
ಇನ್ನು ಮುಂದೆ ಅಂಚೆ ಇಲಾಖೆಯಿಂದಲೇ ಸಂಬಂಧಿಸಿದ ಕಚೇರಿಗಳಿಂದ ಪ್ರಮಾಣ ಪತ್ರ ಸಂಗ್ರಹಿಸಿ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಪ್ರಮಾಣ ಪತ್ರ ಸಿದ್ಧವಾಗಲಿದೆ. ಅಂಚೆ ಕಚೇರಿ ಸಿಬ್ಬಂದಿ ಸಂಬಂಧಿಸಿದ ನಾಡಕಚೇರಿ, ತಾಲೂಕು ಕಚೇರಿ, ಮಹಾನಗರ ಪಾಲಿಕೆ, ಪುರಸಭೆ, ನಗರಸಭೆಗೆ ತೆರಳಿ ಅವುಗಳನ್ನು ಸಂಗ್ರಹಿಸಿ ಸ್ಪೀಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ತಲುಪಿಸಲಿದ್ದು, ರಾಜ್ಯದ 9 ಸಾವಿರ ಅಂಚೆ ಕಚೇರಿಗಳು ಈ ಸೇವೆ ಒದಗಿಸಲಿವೆ ಎಂದು ಹೇಳಲಾಗಿದೆ.