ಬೆಂಗಳೂರು: ಲೋಕಸಭಾ ಚುನವಾಣೆಯಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ 1 ಲಕ್ಷ ಹಣ ಜಮೆ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಖಾತೆ ತೆರೆಯಲು ಮಹಿಳೆಯರು ಪೋಸ್ಟ್ ಆಫೀಸ್ ಗಳ ಮುಂದೆ ಸರತಿ ಸಾಲುಗಳಲ್ಲಿ ನಿಂತಿರುವ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.
ಮೇ 31ರವರೆಗೆ ಮಾತ್ರ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಖಾತೆ ತೆರೆಯಲು ಅವಕಾಶವಿರುವ ಹಿನ್ನೆಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರಿನ ಪ್ರಧಾನ ಅಂಚೆ ಕಚೇರಿ ಮುಂದೆ ಮಹಿಳೆಯರು ಕ್ಯೂ ನಿಂತಿದ್ದಾರೆ.
ಐಪಿಪಿಬಿ ಅಕೌಂಟ್ ತೆರೆದರೆ ಮಾತ್ರ ಖಾತೆಗೆ ಹಣ ಹಾಕಲಾಗುತ್ತದೆ ಎಂಬ ವದಂತಿ ಕೂಡ ಹಬಿದ್ದು ಈ ಹಿನ್ನೆಲೆಯಲ್ಲಿ ಅಂಚೆ ಕಚೇರಿಗೆ ದೌಡಾಯಿಸಿರುವ ಮಹಿಳೆಯರು ಸಾಲು ಗಟ್ಟಿ ನಿಂತಿದ್ದಾರೆ. ಮಹಿಳೆಯರನ್ನು ನಿಯಂತ್ರಿಸಲು ಅಧಿಕಾರಿಗಳು, ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ.
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 8,500 ರೂಪಾಯಿ ವರ್ಷಕ್ಕೆ 1 ಲಕ್ಷ ಜಮೆ ಆಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದರು. ಇದನ್ನೇ ತಪ್ಪಾಗಿ ಭಾವಿಸಿದ ಮಹಿಳೆಯರು ಅಂಚೆ ಕಚೇರಿಗೆ ತೆರಳಿ ಐಪಿಪಿಬಿ ಖಾತೆ ತೆರೆಯಲು ಮುಗಿಬಿದ್ದಿದ್ದಾರೆ.
ಆದರೆ ಅಂಚೆ ಕಚೇರಿ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ಮಾಹಿತಿ ಅಂಚೆ ಕಚೇರಿಗೆ ಬಂದಿಲ್ಲ. ಐಪಿಪಿಬಿ ಖಾತೆ ತೆರೆದರೆ ಅಂತಹ ಯಾವುದೇ ಹಣ ನಿಮ್ಮ ಖಾತೆಗೆ ಬರುವುದಿಲ್ಲ. ಇದೊಂದು ಸುಳ್ಳು ವದಂತಿ. ಯಾರೂ ಕೂಡ ಇಂತಹ ವದಂತಿ ನಂಬಬೇಡಿ ಎಂದು ತಿಳಿಸಿದ್ದಾರೆ. ಅಲ್ಲದೇ ಅಂಚೆ ಕಚೇರಿ ಎದುರು ನಾಮಫಲಕಗಳನ್ನು ಹಾಕಲಾಗಿದ್ದು, ಮೈಕ್ ಮೂಲಕವೂ ತಿಳಿಸಲಾಗುತ್ತಿದೆ.