ಚೆನ್ನೈ: 50 ಪೈಸೆ ಹಿಂತಿರುಗಿಸದ ಪ್ರಕರಣದಲ್ಲಿ ಗ್ರಾಹಕನಿಗೆ 10,000 ರೂ. ಪರಿಹಾರವಾಗಿ ನೀಡುವಂತೆ ಅಂಚೆ ಇಲಾಖೆಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ನಿರ್ದೇಶನ ನೀಡಿದೆ.
2023ರ ಡಿಸೆಂಬರ್ 13ರಂದು ಚೆನ್ನೈನ ಪೊಜಿಚೆಲೂರು ಪೋಸ್ಟ್ ಆಫೀಸ್ ನಲ್ಲಿ ರಿಜಿಸ್ಟರ್ ಲೆಟರ್ ಖರೀದಿಸಿದ್ದ ಗೇರುಗಂಬಾಕ್ಕಂನ ಮಾನಶಾ ಅವರು 30 ರೂಪಾಯಿ ನಗದು ಪಾವತಿಸಿದ್ದರು. ಆದರೆ ರಶೀದಿಯಲ್ಲಿ 29.50 ರೂ. ಎಂದು ನಮೂದಾಗಿತ್ತು. ಯುಪಿಐ ಮೂಲಕ ಪಾವತಿಸುವುದಾಗಿ ಮಾನಶಾ ಹೇಳಿದ್ದರೂ ತಾಂತ್ರಿಕ ಕಾರಣ ನೀಡಿದ ಅಂಚೆ ಇಲಾಖೆ ಸಿಬ್ಬಂದಿ ನಿರಾಕರಿಸಿದ್ದರು.
ಇದರ ವಿರುದ್ಧ ಮಾನುಶಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದು, ಪ್ರಕರಣದ ವಿಚಾರಣೆ ನಡೆಸಿದ ಆಯೋಗ ಮಾನಶಾ ಅವರಿಗೆ 50 ಪೈಸೆ ಮರುಪಾವತಿಸುವಂತೆ ಇಲಾಖೆಗೆ ಸೂಚನೆ ನೀಡಿದೆ. ಗ್ರಾಹಕರಿಗೆ ಮಾನಸಿಕ ಒತ್ತಡ ಹೇರಿದ ಮತ್ತು ನ್ಯಾಯ ಸಮ್ಮತವಲ್ಲದ ವ್ಯವಹಾರ ನಡೆಸಿದ್ದಕ್ಕಾಗಿ 10 ಸಾವಿರ ರೂ., ವ್ಯಾಜ್ಯ ಶುಲ್ಕವಾಗಿ 5 ಸಾವಿರ ರೂ. ಪಾವತಿಸುವಂತೆ ಆದೇಶಿಸಿದೆ.