ಬೆಂಗಳೂರು: ವಿದೇಶಗಳಿಂದ ಭಾರತೀಯ ಅಂಚೆ ಮೂಲಕ ಬೆಂಗಳೂರಿಗೆ ಧರಿಸಿಕೊಂಡಿದ್ದ 21.17 ಕೋಟಿ ರೂಪಾಯಿ ಮೌಲ್ಯದ ವಿವಿಧ ರೀತಿಯ ನಿಷೇಧಿತ ಮಾದಕ ವಸ್ತುಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹದಳ ಅಧಿಕಾರಿಗಳು ಮತ್ತು ಕಸ್ಟಮ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ.
ಚಾಮರಾಜಪೇಟೆ ಫಾರಿನ್ ಪೋಸ್ಟ್ ಆಫೀಸ್ ಗೆ ಅಮೆರಿಕ, ಯುಕೆ, ಬೆಲ್ಜಿಯಂ, ಥೈಲ್ಯಾಂಡ್, ನೆದರ್ಲ್ಯಾಂಡ್ ಸೇರಿದಂತೆ ವಿವಿಧ ದೇಶಗಳಿಂದ 3500 ಅನುಮಾನಾಸ್ಪದ ಪಾರ್ಸೆಲ್ ಗಳು ಬಂದಿದ್ದವು. ಈ ಸಂಬಂಧ ಪೋಸ್ಟ್ ಆಫೀಸ್ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಮಾದಕ ದ್ರವ್ಯ ನಿಗ್ರಹದಳ ಅಧಿಕಾರಿಗಳು ಮತ್ತು ಕಸ್ಟಮ್ಸ್ ಅಧಿಕಾರಿಗಳು ಶ್ವಾನ ದಳದೊಂದಿಗೆ ಪಾರ್ಸೆಲ್ ಗಳನ್ನು ಪರಿಶೀಲಿಸಿದ್ದಾರೆ.
606 ಅನುಮಾನಾಸ್ಪದ ಪಾರ್ಸೆಲ್ ಗಳಲ್ಲಿ ಮಾದಕ ವಸ್ತು ಕಂಡುಬಂದಿದೆ. ಕೋರ್ಟ್ ಅನುಮತಿ ಪಡೆದುಕೊಂಡು 21.17 ಕೋಟಿ ರೂಪಾಯಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ವಿದೇಶಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಬೆಂಗಳೂರಿಗೆ ತರಿಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸಿರುವ ಮಾಹಿತಿ ಲಭ್ಯವಾಗಿದ್ದು, ಇದನ್ನು ಆಧರಿಸಿ ಸಿಸಿಬಿ ಪ್ರಕರಣ ದಾಖಲಿಸಿಕೊಂಡು ವಿದೇಶಗಳಿಂದ ಪಾರ್ಸೆಲ್ ತರಿಸಿಕೊಂಡ ಆರೋಪಿಗಳ ಪತ್ತೆಗೆ ತನಿಖೆ ನಡೆಸಿದೆ. ಹೈಡ್ರೋಗಾಂಜಾ, ಎಂಡಿಎಂಎ, ಕ್ರಿಸ್ಟಲ್, ಎಕ್ಸ್ಟೆಸಿ ಮಾತ್ರೆಗಳು, ಕೊಕೇನ್, ಗಾಂಜಾ ಎಣ್ಣೆ, ಚರಸ್ ಸೇರಿ ವಿವಿಧ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.