
ಅಂಚೆ ಕಚೇರಿಯಿಂದ ಹಣ ವಿತ್ ಡ್ರಾ ಮಾಡುವುದು ಈಗ ಸುಲಭವಾಗಿದೆ. ವೃದ್ಧಾಪ್ಯ ಅಥವಾ ಬೇರೆ ಕಾರಣದಿಂದ ಅಂಚೆ ಕಚೇರಿಗೆ ಬರಲು ಸಾಧ್ಯವಾಗದ ಹಿರಿಯ ನಾಗರಿಕರಿಗೆ ನಿಯಮವನ್ನು ಸರಳಗೊಳಿಸಲಾಗಿದೆ. ಹಣ ವಿತ್ ಡ್ರಾ ಮಾಡಲು ಅಥವಾ ಖಾತೆ ಮುಚ್ಚಲು,ಹಿರಿಯ ನಾಗರಿಕರೇ ಅಂಚೆ ಕಚೇರಿಗೆ ಬರಬೇಕೆಂದೆನಿಲ್ಲ. ಅಧಿಕೃತ ವ್ಯಕ್ತಿಯಿಂದ ಈ ಕೆಲಸ ಮಾಡಿಸಬಹುದಾಗಿದೆ. ಆದ್ರೆ ಖಾತೆಯಲ್ಲಿರುವ ಹಣದ ಸುರಕ್ಷತೆಗಾಗಿ ಅಂಚೆ ಕಚೇರಿ ಕೆಲ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಅಂಚೆ ಕಚೇರಿಯ ಈ ಸೇವೆ ಅಗತ್ಯವಿರುವವರು ಪೋಸ್ಟ್ ಮ್ಯಾನ್ ಗೆ ಅರ್ಜಿ 12ನ್ನು ಭರ್ತಿ ಮಾಡಿ ನೀಡಬೇಕು. ಖಾತೆಯು ಜಂಟಿಯಾಗಿದ್ದರೆ, ಇಬ್ಬರು ಖಾತೆದಾರರಲ್ಲಿ ಒಬ್ಬರು ಅಧಿಕೃತ ವ್ಯಕ್ತಿಯ ಸಹಿಯನ್ನು ದೃಢೀಕರಿಸಬಹುದು. ಅಧಿಕೃತ ವ್ಯಕ್ತಿಯು ಅಂಚೆ ಕಚೇರಿಯ ಏಜೆಂಟ್ ಅಥವಾ ಉದ್ಯೋಗಿಯಾಗಿರಬಾರದು.
ಖಾತೆದಾರರು ಸ್ವಯಂ ದೃಢೀಕರಿಸಿದ ಗುರುತಿನ ಪ್ರತಿಯನ್ನು ಮತ್ತು ಅಧಿಕೃತ ವ್ಯಕ್ತಿಯ ವಿಳಾಸ ಪುರಾವೆಗಳನ್ನು ಸಹ ನೀಡಬೇಕಾಗುತ್ತದೆ. ಅಧಿಕೃತ ವ್ಯಕ್ತಿಯ ಮೂಲಕ ಖಾತೆಯಿಂದ ಹಣ ವಿತ್ ಡ್ರಾ ಮತ್ತು ಇತರ ಕೆಲಸಕ್ಕೆ ಅನುಮತಿಸುವ ಮೊದಲು ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ನಂತ್ರ ಈ ವ್ಯಕ್ತಿ,ಖಾತೆದಾರನ ಪರವಾಗಿ ಹಣ ವಿತ್ ಡ್ರಾ ಮಾಡಬಹುದು.