ಕಚೇರಿ ಕೆಲಸ ಮನೆಗೆ ತರಬೇಡಿ, ಮನೆ ಕೆಲಸವನ್ನ ಕಚೇರಿಗೆ ತೆಗೆದುಕೊಂಡು ಹೋಗಬೇಡಿ ಎಂಬ ಮಾತಿದೆ. ಆದ್ರೆ ಕೊರೊನಾ ಎಲ್ಲವನ್ನೂ ಅದಲು ಬದಲು ಮಾಡಿದೆ. ಮನೆಯಲ್ಲಿಯೇ ಕಚೇರಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಸದ್ಯ ನಿಧಾನವಾಗಿ ಕಚೇರಿಗಳು ಶುರುವಾಗಿವೆ. ಪೋರ್ಚುಗಲ್ ಸರ್ಕಾರ, ಉದ್ಯೋಗಿಗಳನ್ನು ಆರೋಗ್ಯವಾಗಿಡಲು ಮಹತ್ವದ ಘೋಷಣೆ ಮಾಡಿದೆ.
ಕೆಲಸದ ಸಮಯ ಪ್ರಾರಂಭವಾಗುವ ಮೊದಲು ಅಥವಾ ನಂತರ ಉದ್ಯೋಗಿಗಳಿಗೆ ಬಾಸ್ ಕರೆ ಮಾಡಬಾರದು. ಒಂದು ವೇಳೆ ಕರೆ ಮಾಡಿದ್ರೆ ಬಾಸ್‌ಗೆ ಶಿಕ್ಷೆಯಾಗುತ್ತದೆ ಎಂಬ ಸುಗ್ರೀವಾಜ್ಞೆಯನ್ನು ಹೊರಡಿಸಿದೆ.
ಉದ್ಯೋಗಿಗಳನ್ನು ಮುಷ್ಠಿಯಲ್ಲಿಟ್ಟುಕೊಳ್ಳಲು, ಕೆಲಸದ ಸಮಯ ಮುಗಿದ ನಂತರವೂ ಬಾಸ್, ಉದ್ಯೋಗಿಗಳಿಗೆ ಕರೆ ಅಥವಾ ಸಂದೇಶ ಕಳುಹಿಸುತ್ತಾರೆ. ಈ ಮೂಲಕ ಒತ್ತಡ ಹೇರಲು ಪ್ರಯತ್ನಿಸುತ್ತಾರೆ. ಇದು ಉದ್ಯೋಗಿಗಳ ನೆಮ್ಮದಿ ಹಾಳು ಮಾಡ್ತಿದೆ. ಕೆಲಸ ಶುರುವಾಗುವ ಮೊದಲೇ ಸಿಬ್ಬಂದಿಗೆ ಕರೆ ಮಾಡಿ, ಮಾಡಬೇಕಾದ ಕೆಲಸ ಬಗ್ಗೆ ಸೂಚನೆ ನೀಡುತ್ತಾರೆ. ಇದ್ರಿಂದ ಉದ್ಯೋಗಿಗಳ ಮೇಲೆ ಸದಾ ಒತ್ತಡವಿರುತ್ತದೆ. ಇದು ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಇದಲ್ಲದೆ, ಉದ್ಯೋಗಿ ಮಗು 8 ವರ್ಷಕ್ಕಿಂತ ಚಿಕ್ಕದಾಗಿದ್ದರೆ, ಮನೆಯಲ್ಲೇ ಕೆಲಸ ಮಾಡಬಹುದು. ಇದಕ್ಕೆ ಬಾಸ್ ಒಪ್ಪಿಗೆ ನೀಡುವುದು ಅನಿವಾರ್ಯ. ಒಂದು ವೇಳೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡದೆ ಹೋದಲ್ಲಿ ಕಂಪನಿಗೆ ದಂಡ ಮತ್ತು ಶಿಕ್ಷೆ ನೀಡಬಹುದು ಎಂದು ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ.