ಪುಣೆ: ಪೋರ್ಶೆ ಕಾರು ಅಪಘತ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಕ್ರೈಂ ಬ್ರ್ಯಾಂಚ್ ಪೊಲೀಸರು ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.
ಸಾಸೂನ್ ಆಸ್ಪತ್ರೆಯ ಡಾ.ಶ್ರೀಹರಿ ಹಾರ್ಲರ್ ಹಾಗೂ ಡಾ.ಅಜಯ್ ತಾವ್ರೆ ಬಂಧಿತರು. ಇಬ್ಬರು ವೈದ್ಯರು ಪೋರ್ಶೆ ಕಾರು ಅಪಘಾತ ಮಾಡಿದ್ದ ಅಪ್ರಾಪ್ತ ಬಾಲಕ ವೇದಾಂತ್ ಅಗರ್ವಾಲ್ ನ ರಕ್ತದ ಮಾದರಿ ವರದಿ ತಿರುಚಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ವೈದ್ಯರನ್ನು ಬಂಧಿಸಲಾಗಿದೆ.
ಕಾರು ಅಪಘಾತ ಪ್ರಕರಣದಲ್ಲಿ ಅಪ್ರಾಪ್ತನನ್ನು ವೈದ್ಯಕೀಯ ಪರೀಕ್ಷೆಗಾಗಿ ಪುಣೆಯ ಸಸೂನ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಆತನ ಕುಟುಂಬದವರು ಹಣದ ಆಮಿಷವೊಡ್ಡಿ, ವೈದ್ಯರಿಂದ ರಕ್ತದ ವರದಿ ತಿರುಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸುದೀರ್ಘ ವಿಚಾರಣೆ ಬಳಿಕ ಡಾ.ಶ್ರೀಹರಿ ಹಾಗೂ ಡಾ.ಅಜಯ್ ಅವರನ್ನು ಬಂಧಿಸಲಾಗಿದೆ.
ಮೇ 19ರಂದು ಅಪ್ರಾಪ್ತನೊಬ್ಬ ಪೋರ್ಶೆ ಕಾರು ಓಡಿಸಿ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಕುಡಿದ ಮತ್ತಿನಲ್ಲಿ ಅಪ್ರಾಪ್ತ ಕಾರು ಓಡಿಸಿ ಈ ದುರ್ಘಟನೆಗೆ ಕಾರಣನಾಗಿದ್ದಾನೆ. ಆರೋಪಿ ತನ್ನ ಸ್ನೇಹಿತನ ಜೊತೆ ಬಾರ್ ನಲ್ಲಿ ಮದ್ಯ ಸೇವಿಸುತ್ತಿರುವ ದೃಶ್ಯ ಸೆರೆಯಾಗಿತ್ತು. ಒಟ್ಟಾರೆ ಪ್ರಕರಣದಲ್ಲಿ ಅಪ್ರಾಪ್ತನ ತಂದೆ, ಅಜ್ಜ ಸೇರಿದಂತೆ 9 ಜನರನ್ನು ಬಂಧಿಸಲಾಗಿದೆ.