ಕ್ಯಾಥೋಲಿಕ್ ಚರ್ಚ್ ನ ಮುಖ್ಯಸ್ಥರಾದ ಪೋಪ್ ಫ್ರಾನ್ಸಿಸ್, ಸೆಕ್ಸ್ (ಲೈಂಗಿಕ ಕ್ರಿಯೆ) ದೇವರ ಅದ್ಭುತ ಸೃಷ್ಟಿ ಎಂದು ಬಣ್ಣಿಸಿದ್ದಾರೆ.
ಬುಧವಾರ ಬಿಡುಗಡೆಯಾದ ಸಾಕ್ಷ್ಯಚಿತ್ರದಲ್ಲಿ ಪೋಪ್ ಫ್ರಾನ್ಸಿಸ್ ಲೈಂಗಿಕತೆಯ ಸದ್ಗುಣಗಳನ್ನು ಶ್ಲಾಘಿಸಿದ್ದಾರೆ, “ಸೆಕ್ಸ್ ಎಂಬುದು ದೇವರು ಮಾನವನಿಗೆ ನೀಡಿದ ಸುಂದರವಾದ ಸಂಗತಿಗಳಲ್ಲಿ ಒಂದಾಗಿದೆ” ಎಂದು ವಿವರಿಸಿದ್ದಾರೆ.
86 ವರ್ಷ ವಯಸ್ಸಿನ ಪೋಪ್ ಫ್ರಾನ್ಸಿಸ್ , ಡಿಸ್ನಿ ನಿರ್ಮಾಣದ “ದಿ ಪೋಪ್ ಆನ್ಸರ್ಸ್” ನಲ್ಲಿ ಈ ರೀತಿ ಬಣ್ಣಿಸಿದ್ದಾರೆ. ಸಾಕ್ಷ್ಯಚಿತ್ರವನ್ನು ಕಳೆದ ವರ್ಷ ರೋಮ್‌ನಲ್ಲಿ ನಡೆದ ಸಂವಾದ ಸಭೆಯಲ್ಲಿ ಚಿತ್ರೀಕರಿಸಿದ್ದು ಅದರಲ್ಲಿ 20 ವರ್ಷ ವಯಸ್ಸಿನ 10 ಜನರೊಂದಿಗೆ ಸಂವಾದ ನಡೆಸಲಾಗಿತ್ತು.
ಸಾಕ್ಷ್ಯಚಿತ್ರದಲ್ಲಿ LGBT ಹಕ್ಕುಗಳು, ಗರ್ಭಪಾತ, ಪೋರ್ನ್ ಉದ್ಯಮ, ಲೈಂಗಿಕತೆ ಮತ್ತು ಕ್ಯಾಥೋಲಿಕ್ ಚರ್ಚ್‌ನೊಳಗಿನ ನಂಬಿಕೆ ಮತ್ತು ಲೈಂಗಿಕ ನಿಂದನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಫ್ರಾನ್ಸಿಸ್ ಅವರನ್ನು ಪ್ರಶ್ನಿಸಲಾಯಿತು. ಆ ಎಲ್ಲ ಪ್ರಶ್ನೆಗಳಿಗೆ ಪೋಪ್ ಉತ್ತರಿಸಿದ್ದು, “ಮನುಷ್ಯನಿಗೆ ದೇವರು ನೀಡಿದ ಸುಂದರವಾದ ಸಂಗತಿಗಳಲ್ಲಿ ಲೈಂಗಿಕತೆ ಒಂದು” ಎಂದು ಅವರು ಸಾಕ್ಷ್ಯಚಿತ್ರದಲ್ಲಿ ಹೇಳಿದ್ದಾರೆ.
ಹಸ್ತಮೈಥುನದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು “ನಿಜವಾದ ಲೈಂಗಿಕ ಅಭಿವ್ಯಕ್ತಿಯಿಂದ ದೂರವಿರುವುದು ನಿಮ್ಮನ್ನು ಕುಂಠಿತಗೊಳಿಸುತ್ತದೆ” ಎಂದು ಉತ್ತರಿಸಿದ್ದಾರೆ. LGBT ಜನರನ್ನು ಕ್ಯಾಥೋಲಿಕ್ ಚರ್ಚ್ ಸ್ವಾಗತಿಸುತ್ತದೆ ಎಂದು ಅವರು ಪುನರಾವರ್ತಿಸಿದರು.
ಎಲ್ಲಾ ವ್ಯಕ್ತಿಗಳು ದೇವರ ಮಕ್ಕಳು, ದೇವರು ಯಾರನ್ನೂ ತಿರಸ್ಕರಿಸುವುದಿಲ್ಲ, ದೇವರು ತಂದೆ. ಚರ್ಚ್‌ನಿಂದ ಯಾರನ್ನೂ ಹೊರಹಾಕಲು ನನಗೆ ಯಾವುದೇ ಹಕ್ಕಿಲ್ಲ ಎಂದು ಅವರು ಹೇಳಿದರು.
ಗರ್ಭಪಾತದ ಬಗ್ಗೆ ಉತ್ತರಿಸಿದ ಅವರು ಇಂತಹ ಸ್ಥಿತಿಯಲ್ಲಿ ಮಹಿಳೆಯರ ಬಗ್ಗೆ ಕರುಣೆ ತೋರಬೇಕು ಆದರೆ ಈ ಅಭ್ಯಾಸವು ಸ್ವೀಕಾರಾರ್ಹವಲ್ಲ ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.
ಪೋಪ್ ಅವರ ಹೇಳಿಕೆಗಳನ್ನು ಅಧಿಕೃತ ವ್ಯಾಟಿಕನ್ ಪತ್ರಿಕೆಯಾದ L’Osservatore Romano ಪ್ರಕಟಿಸಿದೆ. ಇದು ಯುವ ಜನರೊಂದಿಗೆ ಅವರ ಸಂಭಾಷಣೆಯನ್ನು “ಮುಕ್ತ ಮತ್ತು ಪ್ರಾಮಾಣಿಕ ಸಂಭಾಷಣೆ” ಎಂದು ವಿವರಿಸಿದೆ.