ಸ್ವಾರ್ಥ ಮನೋಭಾವನೆ, ದುರುದ್ದೇಶ, ರಾಜಕೀಯವೇ ತುಂಬಿ ತುಳುಕುತ್ತಿರುವ ಇಂದಿನ ದಿನಗಳಲ್ಲಿ ನಿಸ್ವಾರ್ಥ ಮನೋಭಾವದ ಶ್ರಮಜೀವಿ ಮಹಿಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಕಲಚೇತನ ಮಹಿಳೆಯೊಬ್ಬರ ಪರಿಶ್ರಮ ಕಲ್ಲು ಹೃದಯವನ್ನೂ ಕರಗಿಸುವಂತಿದೆ.
ಜೀವನೋಪಾಯಕ್ಕಾಗಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿರುವ ವಿಕಲಚೇತನ ಮಹಿಳೆಯೊಬ್ಬರು ತನ್ನ ಕಾಲಿನ ಪಾದದಲ್ಲಿ ಸಮಸ್ಯೆಯಿದ್ದರೂ ಅದನ್ನೂ ಮೆಟ್ಟಿನಿಂತು ಕಷ್ಟಪಟ್ಟು ಕೆಲಸ ಮಾಡುತ್ತಿರುವುದನ್ನು ನೋಡಿದರೆ ಎಂತವರ ಹೃದಯೂ ಅಯ್ಯೋ ಎನ್ನಲಾರದು…. ಕಷ್ಟಪಟ್ಟು ಪೆಟ್ರೋಲ್ ಬಂಕ್ ನಲ್ಲಿ ದುಡಿಯುತ್ತಿರುವ ಮಹಿಳೆ ಕಂಡು ಯಾರೋ ಮಹಾನುಭಾವರು ಆಕೆಯ ಮನೆ ಬಳಿ ಬಂದು ಒಂದಿಷ್ಟು ಹಣ ನೀಡಲು ಮುಂದಾದಾಗ ದಂಗಾದ ಮಹಿಳೆ ಒಂದು ಮಾರು ದೂರ ಸರಿಯುತ್ತಾರೆ. ಹಣ ತೆಗೆದುಕೊಳ್ಳಲು ನಿರಾಕರಿಸುತ್ತಾರೆ.
ಗುಡಿಸಲಿನಲ್ಲಿಯೇ ಇದ್ದರೂ ಕಷ್ಟಪಟ್ಟು ದುಡಿದು ತಿಂದರೆ ಸಾರ್ಥಕತೆ ಎಂಬ ಭಾವ…… ಜೀವನದ ಬಂಡಿ ಸಾಗಿಸಲು ಕಷ್ಟಪಟ್ಟು ದುಡಿಯುತ್ತಿದ್ದರೂ ಮಹಿಳೆಯ ಮುಖದಲ್ಲಿನ ಮುಗ್ಧತೆ, ಮಂದಹಾಸಕ್ಕೆ ಬೆಲೆಕಟ್ಟಲಾಗದು. ಕಡುಬಡತನ, ಅಂಗವೈಕಲ್ಯಕ್ಕೂ ಸವಾಲೊಡ್ಡಿ ಸಾಗುತ್ತಿರುವ ಈ ದೃಶ್ಯ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ.
ಬಡತನವಿದ್ದರೂ ಎಂತಹ ಸಭ್ಯತೆ, ನಿಸ್ವಾರ್ಥ ಮನಸ್ಸು…… ಇವರಲ್ಲಿರುವ ನಿಸ್ವಾರ್ಥ ಮನೋಭಾವ, ನಿಷ್ಕಲ್ಮಷತೆ ಸ್ವಲ್ಪವಾದರೂ ಎಲ್ಲರಲ್ಲಿಯೂ ಇದ್ದರೆ ಈ ಪ್ರಪಂಚ ಅದೆಷ್ಟು ಅದ್ಭುತ.