ಚಿತ್ರದುರ್ಗ : ದೇಶದಲ್ಲಿಯೇ ಮೊದಲು ಜಾರಿಗೆ ತಂದಿರುವ ರಾಜ್ಯದ ಪಂಚಭಾಗ್ಯ ಯೋಜನೆಗಳು ಬಡವರನ್ನು, ಕೆಳವರ್ಗದ ಜನರನ್ನು, ಮಹಿಳೆಯರನ್ನು ಸಬಲೀಕರಣಗೊಳಿಸಿ ಮುಖ್ಯ ವಾಹಿನಿಗೆ ತರಲು ಯಶಸ್ವಿಯಾಗುತ್ತಿವೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಲಾದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ಸಂದೇಶ ನೀಡಿದರು.
ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಪಂಚಭಾಗ್ಯ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮೀ, ಶಕ್ತಿಯೋಜನೆ, ಗೃಹಜ್ಯೋತಿ, ಯುವನಿಧಿ ಯೋಜನೆಗಳನ್ನು ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 4.50 ಲಕ್ಷ, ಗೃಹಜ್ಯೋತಿ ಯೋಜನೆಯಡಿ 3.71 ಲಕ್ಷ, ಗೃಹಲಕ್ಷ್ಮೀ ಯೋಜನೆಯಡಿ 3.70 ಲಕ್ಷ, ಯುವನಿಧಿ ಯೋಜನೆಯಡಿ 3040 ವಿದ್ಯಾರ್ಥಿಗಳು ಹಾಗೂ ಶಕ್ತಿ ಯೋಜನೆಯಡಿ 1.36 ಕೋಟಿ ಮಹಿಳೆಯರು ಈ ಯೋಜನೆಗಳ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
“ಬಡತನವ ಬುಡಮಟ್ಟ ಕೀಳ ಬನ್ನಿ” ಎಂದು ರಾಷ್ಟ್ರ ಕವಿ ಕುವೆಂಪುರವರು ಕರೆ ಕೊಟ್ಟಂತೆ ಬಡತನ ನಿರ್ಮೂಲನೆಗಾಗಿ, ಯುವಕರಿಗೆ ಉದ್ಯೋಗ ನೀಡುವುದಕ್ಕಾಗಿ ಮತ್ತು ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವುದಕ್ಕಾಗಿ ಈ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. “ನುಡಿದಂತೆ ನಡೆದ ನಮ್ಮ ಸರ್ಕಾರ” ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.
ಚಿತ್ರದುರ್ಗ ಜಿಲ್ಲೆಯ ಬಹುದಿನಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆ ಸಾಕಾರಗೊಂಡು ಬರದ ನಾಡು ಹಸಿರುನಾಡಾಗುವ ದಿನಗಳು ಕ್ಷಣಗಣನೆಯಲ್ಲಿವೆ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿ ಪೂರ್ಣಗೊಳಿಸಲು ಇರುವ ಕೆಲವೇ ತಾಂತ್ರಿಕ ತೊಡಕುಗಳನ್ನು ಸ್ಥಳದಲ್ಲಿಯೇ ನಿವಾರಿಸಲು ಕೋರಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇವರನ್ನು ಕೋರಲಾಗಿದೆ. ಈ ತಿಂಗಳಾಂತ್ಯದೊಳಗೆ ಭೇಟಿ ನೀಡಿ ಉಪಮುಖ್ಯಮಂತ್ರಿಗಳು ಪರಿವೀಕ್ಷಣೆ ಮಾಡುವರು. 2024 ರ ಅಕ್ಟೋಬರ್ ತಿಂಗಳ ಅಂತ್ಯದೊಳಗೆ ಚಿತ್ರದುರ್ಗದವರೆಗೆ ಭದ್ರಾ ಮೇಲ್ದಂಡೆ ನೀರು ಹರಿಸುವ ಗುರಿ ಹೊಂದಲಾಗಿದೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಐತಿಹಾಸಿಕ ಚಿತ್ರದುರ್ಗದ ಕೋಟೆಗೆ ಹೊನಲು ಬೆಳಕು ವ್ಯವಸ್ಥೆ, ಚಂದ್ರವಳ್ಳಿ ತೋಟ ನವೀಕರಣ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹಾಗೂ ಪ್ರವಾಸಿಗರಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು 29 ಕೋಟಿ ರೂ. ಗಳ ಅಂದಾಜಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಯೋಜನೆಗೆ ಅಂತಿಮ ರೂಪುರೇಷೆಗಳನ್ನು ನೀಡಲಾಗುತ್ತಿದೆ. ಜಿಲ್ಲೆಯ ಬಹುದಿನದ ಕನಸಾದ ಸರ್ಕಾರಿ ಮೆಡಿಕಲ್ ಕಾಲೇಜು 2023-24ನೇ ಸಾಲಿನಿಂದ ಪ್ರಾರಂಭವಾಗಿದೆ. 150 ವಿದ್ಯಾರ್ಥಿಗಳು ಪ್ರಥಮ ವರ್ಷದ ಎಂ.ಬಿ.ಬಿ.ಎಸ್ ಕೋರ್ಸ್ ತರಗತಿಗೆ ಪ್ರವೇಶ ಪಡೆದಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದರು.
ಜಿಲ್ಲೆಯ ಆರು ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರ ಈಗಾಗಲೆ ಘೋಷಣೆ ಮಾಡಿದ್ದು, ಬರ ನಿರ್ವಹಣೆಗೆ ಸರ್ಕಾರದಿಂದ ರೂ.9 ಕೋಟಿಗಳ ಹಣ ಬಿಡುಗಡೆಯಾಗಿದೆ. ಈ ವರ್ಷದಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದೆ. ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಬೋರ್‍ವೆಲ್‍ಗಳನ್ನು ಕೊರೆಯಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಹಾಗೂ ದನಕರುಗಳಿಗೆ ಮೇವು ವಿತರಣೆಗೆ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿರುವ ಎಲ್ಲಾ ಹೋಬಳಿಗಳಲ್ಲಿ ಗೋಶಾಲೆ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಚಳ್ಳಕೆರೆ ತಾಲ್ಲೂಕಿನ ಚೌಳೂರು ಗ್ರಾಮದಲ್ಲಿ ಗೋಶಾಲೆ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಗೋಶಾಲೆ ಪ್ರಾರಂಭಿಸಲಾಗುವುದು.
ಜಿಲ್ಲೆಯ ಸವಾರ್ಂಗೀಣ ಅಭಿವೃದ್ಧಿಗೆ ಸರ್ಕಾರ ಕಂಕಣಬದ್ಧವಾಗಿದೆ. ಈ ನಿಟ್ಟಿನಿಲ್ಲಿ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಬಟ್ಟೆ ಉದ್ಯಮದ ಪಾರ್ಕ್ ಮತ್ತು ಚಿತ್ರದುರ್ಗ ತಾಲ್ಲೂಕಿನಲ್ಲಿ ವಿವಿಧ ಕೈಗಾರಿಕಾ ಘಟಕಗಳ ಪಾರ್ಕ್‍ಗಳನ್ನು ಸ್ಥಾಪಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆ ಮತ್ತು ನಗರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಎಲ್ಲರೂ ಸಹಕಾರ ನೀಡಬೇಕು ಎಂದು ಸಚಿವ ಡಿ.ಸುಧಾಕರ್ ಕೋರಿದರು.