
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಕರಡು ಸಿದ್ಧಪಡಿಸಲು ನೇಮಕಗೊಂಡ ಸಮಿತಿ ಶುಕ್ರವಾರ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ದಾಖಲೆ ಸಲ್ಲಿಸಿದೆ.
ಮೂಲಗಳ ಪ್ರಕಾರ, ಬಹುಪತ್ನಿತ್ವ ನಿಷೇಧ, ಸಮಾನ ಉತ್ತರಾಧಿಕಾರ ಹಕ್ಕುಗಳು ಮತ್ತು ಲಿವ್-ಇನ್ ಸಂಬಂಧಗಳ ಕಡ್ಡಾಯ ಘೋಷಣೆಗೆ ಸಂಬಂಧಿಸಿದ ಅಂಶಗಳನ್ನು ಕರಡು ಒಳಗೊಂಡಿದೆ.
ಮುಖ್ಯ ಸೇವಕ ಸದನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಸಮಿತಿಯು ಯುಸಿಸಿ ಕರಡನ್ನು ಧಾಮಿಗೆ ಸಲ್ಲಿಸಿತು. ಕರಡು ಸಲ್ಲಿಕೆಗೂ ಮುನ್ನ ಧಾಮಿ ಅವರ ಅಧಿಕೃತ ನಿವಾಸದ ಹೊರಗೆ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.
ಯುಸಿಸಿಯಲ್ಲಿ ಶಾಸನವನ್ನು ಅಂಗೀಕರಿಸಲು ಉತ್ತರಾಖಂಡ ವಿಧಾನಸಭೆಯ ವಿಶೇಷ ನಾಲ್ಕು ದಿನಗಳ ಅಧಿವೇಶನವು ಫೆಬ್ರವರಿ 5-8 ರಿಂದ ನಡೆಯಲಿದೆ.
ಯುಸಿಸಿ ಕರಡು ಕೈಗೆತ್ತಿಕೊಂಡ ಬಳಿಕ ರಾಜ್ಯ ಸರ್ಕಾರ ಶನಿವಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಿದೆ. ಫೆ.6ರಂದು ಸದನದಲ್ಲಿ ಕರಡು ಮಸೂದೆಯ ರೂಪದಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ.