
ನವದೆಹಲಿ: ದೆಹಲಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಚಟುವಟಿಕೆಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ. ಮುಂದಿನ ಆದೇಶದವರೆಗೆ ಕಟ್ಟಡಗಳ ನಿರ್ಮಾಣಕ್ಕೆ ನಿರ್ಬಂಧ ವಿಧಿಸಲಾಗಿದೆ.
ವಾಯುಮಾಲಿನ್ಯ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಹಾಗೂ ನೆಲಸಮ ಚಟುವಟಿಕೆಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ. ಕೂಲಿಕಾರ್ಮಿಕರ ಖಾತೆಗೆ 5000 ರೂ. ಜಮಾ ಮಾಡಲು ನಿರ್ಧರಿಸಲಾಗಿದೆ. ಡಿಸೆಂಬರ್ 7 ರ ವರೆಗೆ ಟ್ರಕ್ ಗಳಿಗೆ ದೆಹಲಿ ಪ್ರವೇಶಕ್ಕೆ ನಿರ್ಬಂಧವಿದ್ದು, ಅಗತ್ಯ ವಸ್ತುಗಳ ಸರಬರಾಜು ವಾಹನಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ.
ಮೂರನೇ ಹಂತದ ‘ರೆಡ್ ಲೈಟ್ ಆನ್, ಗಾಡಿ ಆಫ್’ ಅಭಿಯಾನವನ್ನು ಘೋಷಿಸಿದ ದೆಹಲಿ ಪರಿಸರ ಸಚಿವ ಗೋಪಾಲ್ ರೈ, ನಗರದಲ್ಲಿ ಮಳೆ ಬೀಳದ ಹೊರತು ಗಾಳಿಯ ಕಳಪೆ ಗುಣಮಟ್ಟ ಸುಧಾರಿಸುವ ಲಕ್ಷಣ ಕಾಣಿಸುತ್ತಿಲ್ಲ. ಅತ್ಯಂತ ಕಳಪೆ ವರ್ಗಕ್ಕಿಂತ ಕಡಿಮೆಯಾಗುವ ನಿರೀಕ್ಷೆಯಿಲ್ಲ ಎಂದು ಹೇಳಿದ್ದಾರೆ.
ಕೆಲವು ನಿರ್ಬಂಧಗಳನ್ನು ಮುಂದುವರೆಸಲಾಗುವುದು. ನಿರ್ಮಾಣ ಚಟುವಟಿಕೆ ನಿಷೇಧದಿಂದ ತೊಂದರೆಗೊಳಗಾದ ಕಾರ್ಮಿಕರಿಗೆ ತಲಾ 5,000 ರೂ. ಪಾವತಿಸಲು ಸರ್ಕಾರ ಪ್ರಕ್ರಿಯೆ ಪ್ರಾರಂಭಿಸಿದೆ. ಒಳಾಂಗಣ ಅಲಂಕಾರ, ಕೊಳಾಯಿ ಮತ್ತು ವಿದ್ಯುತ್ ಕೆಲಸಗಳಂತಹ ಚಟುವಟಿಕೆಗಳನ್ನು ಮುಂದುವರಿಸಬಹುದು ಎಂದು ಅವರು ಹೇಳಿದ್ದು, ಮುಂದಿನ ಆದೇಶದವರೆಗೆ ನಿರ್ಬಂಧ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.