ಕರ್ನಾಟಕ ವಿಧಾನ ಸಭಾ ಚುನಾವಣೆ ಸನ್ನಿಹಿತವಾಗುತ್ತಿರುವ ನಡುವೆಯೇ ಮೈಸೂರಿನಲ್ಲಿ 2,000 ರೂ. ಮುಖಬೆಲೆಯ ನೋಟುಗಳ ವಹಿವಾಟು ಮಾಮೂಲಿಗಿಂತ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ನಗರದಲ್ಲಿ 2,000 ಮುಖಬೆಲೆ ನೋಟುಗಳ ವಹಿವಾಟಿನಲ್ಲಿ 20% ನಷ್ಟು ಏರಿಕೆ ಕಂಡು ಬಂದಿದೆ ಎಂದು ರಾಷ್ಟ್ರೀಕೃತ ಬ್ಯಾಂಕೊಂದರ ಮ್ಯಾನೇಜರ್ ಒಬ್ಬರು ತಿಳಿಸಿದ್ದಾರೆ.
“ನಾವು ವರ್ತಕರು ಹಾಗೂ ಅಂಚೆ ಕಚೇರಿಗಳಿಂದ ಠೇವಣಿಗಳನ್ನು ಸ್ವೀಕರಿಸುತ್ತೇವೆ. ಜನವರಿ, ಫೆಬ್ರವರಿಯಲ್ಲಿ ಅಷ್ಟಾಗಿ ಕಂಡು ಬರದ ಒಂದು ಮುಖಬೆಲೆಯ ನೋಟುಗಳ ಓಡಾಟ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಜೋರಾಗಿರುವುದು ಕಂಡು ಬಂದಿದೆ,” ಎಂದು ಹೆಸರು ಹೇಳಲಿಚ್ಛಿಸದ ಬ್ಯಾಂಕ್ ವ್ಯವಸ್ಥಾಪಕಿ ತಿಳಿಸಿದ್ದಾರೆ.
ಇದೇ ರೀತಿಯ ಹೇಳಿಕೆಯನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೆ ಎಂ ದೊಡ್ಡಿಯ ಬ್ಯಾಂಕೊಂದರ ವ್ಯವಸ್ಥಾಪಕರೂ ಪುನರುಚ್ಛರಿಸಿದ್ದಾರೆ.
ಈ ಕುರಿತು ಮಾತನಾಡಿದ ಬಿಜೆಪಿಯ ಹಿರಿಯ ನಾಯಕರೊಬ್ಬರು, “ನಿರ್ದಿಷ್ಟ ಮುಖಬೆಲೆಯ ನೋಟುಗಳು ಎಲ್ಲಾ ರಾಜಕೀಯ ಪಕ್ಷಗಳ ರಾಜಕಾರಣಿಗಳು ಚುನಾವಣೆಯಲ್ಲಿ ಖರ್ಚು ಮಾಡಲು ಇಟ್ಟುಕೊಂಡಿದ್ದಾರೆ ಎಂಬ ಮಾತುಗಳಿವೆ. ನಾವು ಪಕ್ಷ ಸಂಘಟನೆಯಲ್ಲಿ ತೊಡಗಿರುವ ಕಾರಣ ನಮಗೆ ಇಂಥ ವಹಿವಾಟುಗಳ ಕುರಿತು ಗೊತ್ತಿಲ್ಲ. ಆದರೆ ಪಕ್ಷದ ವರ್ತುಲಗಳಲ್ಲಿ ಇಂಥ ವಹಿವಾಟುಗಳ ಕುರಿತು ಮಾತುಕತೆಗಳು ಚಾಲ್ತಿಯಲ್ಲಿವೆ,” ಎಂದು ತಿಳಿಸಿದ್ದಾರೆ.
ಮತದಾನದ ದಿನ ಹತ್ತಿರವಾಗುತ್ತಿದ್ದಂತೆಯೇ 2,000 ಮುಖಬೆಲೆ ನೋಟುಗಳ ವಹಿವಾಟು ಇನ್ನಷ್ಟು ಹೆಚ್ಚಲಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.