ಬೆಂಗಳೂರು: ಜನವರಿ 31 ರಂದು ಪೋಲಿಯೊ ಲಸಿಕೆ ಹಾಕಿಸುವ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ಪೋಷಕರು ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 17 ರಂದು ಪೋಲಿಯೋ ಲಸಿಕೆ ನೀಡಬೇಕಿತ್ತು. ಕೊರೊನಾ ಲಸಿಕೆ ಬಂದಿದ್ದರಿಂದ ಕಾರ್ಯಕ್ರಮ ಮುಂದೂಡಲಾಗಿತ್ತು. ಇದೇ ತಿಂಗಳು 31 ರಂದು 0-5 ವರ್ಷದ 64,07,930 ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗುವುದು ಎಂದು ಹೇಳಿದ್ದಾರೆ.
ಲಸಿಕೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಚಾಲನೆ ದೊರೆಯಲಿದೆ. ಪೋಷಕರು ಹಿಂದೆ ಲಸಿಕೆ ಹಾಕಿಸಿದ್ದರೂ ಮತ್ತೆ ಹಾಕಿಸಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ. ಕಳೆದ 10-11 ವರ್ಷಗಳಿಂದ ಪೊಲೀಯೋ ಸೋಂಕು ಕಂಡುಬಂದಿಲ್ಲ. ಭಾರತದಲ್ಲಿ ಈ ರೋಗ ನಿಮೂರ್ಲನೆಯಾಗಿದೆ. ಆದರೆ ಪಕ್ಕದ ಪಾಕಿಸ್ತಾನ, ಅಫ್ಘನಿಸ್ತಾನದಲ್ಲಿ ಈ ರೋಗ ಇರುವುದರಿಂದ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕಿದೆ ಎಂದು ಹೇಳಿದ್ದಾರೆ.
ನಮ್ಮಲ್ಲಿ ಒಟ್ಟು 85,05,060 ಡೋಸ್ ಪೋಲಿಯೊ ಲಸಿಕೆ ಲಭ್ಯವಿದೆ. 1,10,179 ವ್ಯಾಕ್ಸಿನೇಟರ್ ಗಳು ಇದ್ದಾರೆ. 6,645 ಸೂಪರ್ ವೈಸರ್ ತಂಡ, 904 ಮೊಬೈಲ್ ತಂಡ ಸಿದ್ಧಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 32,908 ಬೂತ್ ಗಳನ್ನು ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ 2,90,533 ಮಂದಿಗೆ ಕೋವಿಡ್ ಲಸಿಕೆ ನೀಡಿದ್ದು, ಇವತ್ತಿನವರೆಗೆ 49% ಸಾಧನೆಯಾಗಿದೆ. ಲಸಿಕೆ ಪಡೆದಿರುವುದರಿಂದ ಯಾವುದೇ ಸಾವು ಆಗಿಲ್ಲ. ಈ ಬಗ್ಗೆ ತಪ್ಪು ತಿಳಿವಳಿಕೆ ಬೇಡ. ಕೆಲವೆಡೆ ಅಡ್ಡ ಪರಿಣಾಮವಾಗಿದ್ದು, ಅದು ಕೂಡ ನಂತರ ಪರಿಹಾರವಾಗಿದೆ. ಇಂತಹ ಲಸಿಕೆಯ ರಾಮಬಾಣವನ್ನು ಬಳಸದಿದ್ದರೆ ವ್ಯರ್ಥವಾಗುತ್ತದೆ ಎಂದು ಹೇಳಿದ್ದಾರೆ.