ಕಳೆದ ಬುಧವಾರ ಉತ್ತರಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಸಾವನಪ್ಪಿದ 15 ಮಂದಿಯ ಪೈಕಿ ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ರಾವತ್ ಅವರೂ ಸೇರಿದ್ದು ಅವರನ್ನ ದುರಂತದ ಹಿಂದಿನ ದಿನವಷ್ಟೇ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ.
ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ಪ್ರದೀಪ್ ರಾವತ್ ಅವರನ್ನ ಮತ್ತೊಬ್ಬ ಅಧಿಕಾರಿಯ ಗೈರಿನ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಚಮೋಲಿ ಪೊಲೀಸ್ ಠಾಣೆಗೆ ತಾತ್ಕಾಲಿಕವಾಗಿ ನಿಯೋಜಿಸಲಾಗಿತ್ತು.
ಅಪಘಾತದ ದಿನ ಚಮೋಲಿ ಪೊಲೀಸ್ ಠಾಣೆಯ ಕೊತ್ವಾಲ್ ಕುಲದೀಪ್ ರಾವತ್ ಅವರು ನೈನಿತಾಲ್‌ನ ಉತ್ತರಾಖಂಡ ಹೈಕೋರ್ಟ್‌ಗೆ ಹೋಗಬೇಕಾಗಿತ್ತು. ಆದ್ದರಿಂದ ಪ್ರದೀಪ್ ರಾವತ್ ಅವರನ್ನು , ಕೊತ್ವಾಲ್ ಕುಲದೀಪ್ ರಾವತ್ ಅನುಪಸ್ಥಿತಿಯಲ್ಲಿ ಕೆಲಸದ ಮೇಲ್ವಿಚಾರಣೆಗೆ ಪಿಪಾಲ್ಕೋಟಿ ಪೊಲೀಸ್ ಠಾಣೆಯಿಂದ ಚಮೋಲಿಗೆ ನಿಯೋಜಿಸಲಾಗಿತ್ತು ಎಂದು ಚಮೋಲಿ ವೃತ್ತದ ಅಧಿಕಾರಿ ಪ್ರಮೋದ್ ಶಾ ತಿಳಿಸಿದ್ದಾರೆ.
ನಮಾಮಿ ಗಂಗೆ ಯೋಜನೆಯಡಿ ನಿರ್ಮಿಸಲಾಗಿರುವ ಕೊಳಚೆ ನೀರು ಸಂಸ್ಕರಣಾ ಘಟಕದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಬಗ್ಗೆ ಬುಧವಾರ ಪ್ರದೀಪ್ ರಾವತ್ ಮಾಹಿತಿ ಪಡೆದರು. ಅವರು ಪಂಚನಾಮ ನಡೆಸಲು ಸ್ಥಳಕ್ಕೆ ಬಂದಾಗ ಅದೇ ಸ್ಥಳದಲ್ಲಿ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದರು. ಈ ದುರಂತದಲ್ಲಿ ಒಟ್ಟು 15 ಮಂದಿ ಸಾವನ್ನಪ್ಪಿದರು.
ಬುಧವಾರ ಬೆಳಗ್ಗೆ 11.30ರ ಸುಮಾರಿಗೆ ವಿದ್ಯುತ್ ಸ್ಥಾವರದ ಆವರಣದಲ್ಲಿ ಅಳವಡಿಸಲಾಗಿದ್ದ ಲೋಹದ ಕಂಬಿಯ ಮೂಲಕ ವಿದ್ಯುತ್ ಪ್ರವಹಿಸಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಮೂವರು ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ 15 ಮಂದಿ ಸಾವಿಗೀಡಾಗಿದ್ದರು. ಘಟನೆಯಲ್ಲಿ ಹತ್ತು ಮಂದಿ ಗಾಯಗೊಂಡಿದ್ದು, ಅವರಲ್ಲಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.