ಬೆಂಗಳೂರು: ಲಾಕ್ಡೌನ್ ಸಂದರ್ಭದಲ್ಲಿ ಸೀಜ್ ಮಾಡಲಾಗಿದ್ದ ವಾಹನಗಳ ಬಿಡುಗಡೆಗೆ ಹೈಕೋರ್ಟ್ ಆದೇಶ ನೀಡಿದೆ.
ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಮಾರ್ಗಸೂಚಿ ಉಲ್ಲಂಘಿಸಿದವರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಲಾಕ್ ಡೌನ್ ವೇಳೆ ವಾಹನಗಳ ಪರಿಶೀಲನೆ, ತಪಾಸಣೆ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಡುವವರನ್ನು ನಿಯಂತ್ರಿಸಲು ವಾಹನಗಳನ್ನು ಸೀಜ್ ಮಾಡಲಾಗಿತ್ತು.
ಹೀಗೆ ನಿಯಮ ಉಲ್ಲಂಘಿಸಿದವರ ಲಕ್ಷಾಂತರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅವುಗಳನ್ನು ಪೊಲೀಸ್ ಠಾಣೆ ಆವರಣದಲ್ಲಿ ನಿಲುಗಡೆ ಮಾಡಲಾಗಿದೆ. ಆದರೆ, ಪಾರ್ಕಿಂಗ್ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಸೂಕ್ತ ನಿರ್ದೇಶನ ಕೋರಿ ರಾಜ್ಯ ಸರ್ಕಾರ ಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ.
ವಶಕ್ಕೆ ಪಡೆಯಲಾಗಿರುವ ಎಲ್ಲಾ ವಾಹನಗಳನ್ನು ಬಿಡುಗಡೆ ಮಾಡುವಂತೆ ಕೋರ್ಟ್ ಸೂಚನೆ ನೀಡಿದೆ. ವಾಹನಗಳ ಮಾಲೀಕರು ಕೋರ್ಟಿಗೆ ಆಗಮಿಸುವುದು ಬೇಡ. ಇದರಿಂದ ಕೊರೊನಾ ಸೋಂಕು ಹರಡಬಹುದು. ವಾಹನ ಮಾಲೀಕರಿಂದ ದಂಡ ಕಟ್ಟಿಸಿಕೊಂಡು, ಬಾಂಡ್ ಬರೆಸಿಕೊಂಡು ವಾಹನಗಳನ್ನು ಬಿಡುವಂತೆ ತಿಳಿಸಲಾಗಿದೆ.
ರಾಜ್ಯದಲ್ಲಿ ವಶಪಡಿಸಿಕೊಂಡ ಎಲ್ಲಾ ವಾಹನಗಳನ್ನು ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬಾಂಡ್ ಬರೆಸಿಕೊಂಡು ದಂಡ ಪಾವತಿಸಿಕೊಂಡು ಬಿಡುಗಡೆ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.