ಭಾರತೀಯ ಬಿಲಿಯನೇರ್ ಪಂಕಜ್ ಓಸ್ವಾಲ್ ಅವರ ಪುತ್ರಿ ವಸುಂಧರಾ ಓಸ್ವಾಲ್, ಉಗಾಂಡದಲ್ಲಿ ತಮ್ಮ ಅಕ್ರಮ ಬಂಧನದ ಬಗ್ಗೆ ಮಾತನಾಡಿದ್ದಾರೆ. ಐದು ದಿನಗಳ ಕಾಲ ಅಕ್ರಮವಾಗಿ ಬಂಧನಕ್ಕೊಳಗಾಗಿದ್ದ ವಸುಂಧರಾ, ಎರಡು ವಾರಗಳ ಕಾಲ ಅಕ್ರಮವಾಗಿ ಬಂಧಿಸಲ್ಪಟ್ಟಿದ್ದರು.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ವಸುಂಧರಾ, ಪೊಲೀಸ್ ಅಧಿಕಾರಿಗಳು ತಮ್ಮ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ. ತಮ್ಮ ತಂದೆ ಪಂಕಜ್ ಅವರ ಉದ್ಯೋಗಿ ಮುಖೇಶ್ ಮೆನಾರಿಯಾ ಅವರ ಅಪಹರಣ ಮತ್ತು ಕೊಲೆ ಆರೋಪದಲ್ಲಿ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿತ್ತು. ನಂತರ ಮುಖೇಶ್ ಮೆನಾರಿಯಾ ಟಾಂಜಾನಿಯಾದಲ್ಲಿ ಜೀವಂತವಾಗಿ ಪತ್ತೆಯಾಗಿದ್ದರು.
“ನನ್ನ ಮಾನವ ಹಕ್ಕುಗಳನ್ನು ತೀವ್ರವಾಗಿ ಉಲ್ಲಂಘಿಸಲಾಗಿದೆ. ಅವರು ಸ್ಥಳದ ಮೇಲೆ ದಾಳಿ ಮಾಡಲು ಹೋದಾಗ, ಅವರ ಬಳಿ ಶೋಧ ವಾರೆಂಟ್ ಇರಲಿಲ್ಲ” ಎಂದು ವಸುಂಧರಾ ಹೇಳಿದ್ದಾರೆ. “ನಾನು ಅವರಿಗೆ ಶೋಧ ವಾರೆಂಟ್ ತೋರಿಸಲು ಕೇಳಿದಾಗ, ‘ನಾವು ಉಗಾಂಡದಲ್ಲಿದ್ದೇವೆ. ನಾವು ಏನು ಬೇಕಾದರೂ ಮಾಡಬಹುದು. ನೀವು ಯುರೋಪ್‌ನಲ್ಲಿಲ್ಲ’ ಎಂದು ಅವರು ಹೇಳಿ ದಾಳಿ ಮಾಡಲು ಪ್ರಾರಂಭಿಸಿದರು” ಎಂದು ಅವರು ದೂರಿದ್ದಾರೆ.
ಉಗಾಂಡ ಪೊಲೀಸರು ತಮ್ಮ ನಿರ್ದೇಶಕರನ್ನು ಭೇಟಿಯಾಗುವ ನೆಪದಲ್ಲಿ ಇಂಟರ್‌ಪೋಲ್ ಕಚೇರಿಗೆ ಬಲವಂತವಾಗಿ ಕರೆದೊಯ್ದರು ಎಂದಿದ್ದು, ಈ ವೇಳೆ ಪುರುಷ ಪೊಲೀಸ್ ಅಧಿಕಾರಿಯೊಬ್ಬರು ತಮ್ಮನ್ನು ಬಲವಂತವಾಗಿ ವ್ಯಾನ್ ಗೆ ತಳ್ಳಿದರು ಎಂದು ತಿಳಿಸಿದ್ದಾರೆ.
ನಂತರ ಕ್ರಿಮಿನಲ್ ವಕೀಲರ ಬದಲು ಸಿವಿಲ್ ವಕೀಲರೊಂದಿಗೆ ಇಂಟರ್‌ಪೋಲ್‌ಗೆ ಹೇಳಿಕೆ ನೀಡುವಂತೆ ಒತ್ತಾಯಿಸಲಾಯಿತು. “ನಾನು ಹೇಳಿಕೆ ನೀಡದಿದ್ದರೆ ಅನಿರ್ದಿಷ್ಟವಾಗಿ ಬಂಧಿಸಲಾಗುವುದು ಎಂದು ಅವರು ಹೇಳಿದ್ದರಿಂದ ವಕೀಲರನ್ನು ವ್ಯವಸ್ಥೆ ಮಾಡಲು ನಮಗೆ ಸಮಯವನ್ನೂ ನೀಡಲಿಲ್ಲ” ಎಂದು ಅವರು ಹೇಳಿದರು.
ಹೇಳಿಕೆ ನೀಡಿದ ನಂತರ ವಸುಂಧರಾ ಅವರನ್ನು ಸೆಲ್‌ನಲ್ಲಿ ಬಂಧಿಸಲಾಯಿತು ಮತ್ತು ಪೊಲೀಸ್ ಬಾಂಡ್‌ಗಾಗಿ 30,000 ಡಾಲರ್ ಮತ್ತು ಅವರ ಪಾಸ್‌ಪೋರ್ಟ್ ನೀಡುವಂತೆ ಕೇಳಲಾಯಿತು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಮಾರನೆಯ ದಿನ ನ್ಯಾಯಾಲಯದಿಂದ ಬಿಡುಗಡೆ ಆದೇಶ ಬಂದರೂ ಬಿಡುಗಡೆ ಮಾಡಲಿಲ್ಲ ಮತ್ತೆ 72 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಲಾಗಿತ್ತು.
ನಂತರ ವಸುಂಧರಾ ಅವರನ್ನು ಕಳ್ಳತನದಂತಹ ಅಪರಾಧಗಳಿಗೆ ಶಿಕ್ಷೆಗೊಳಗಾದ ಅಪರಾಧಿಗಳೊಂದಿಗೆ ಎರಡು ದಿನಗಳ ಕಾಲ ಜೈಲಿಗೆ ಹಾಕಲಾಯಿತು. ಬಳಿಕ ಅವರನ್ನು ಮತ್ತೊಂದು ಜೈಲಿಗೆ ಸ್ಥಳಾಂತರಿಸಲಾಯಿತು, ಅಲ್ಲಿ ಕೊಲೆಗಾರರು ಮತ್ತು ಮಾನವ ಕಳ್ಳಸಾಗಾಣಿಕೆದಾರರಂತಹ ಶಿಕ್ಷೆಗೊಳಗಾದ ಅಪರಾಧಿಳಿದ್ದು, ನಾನು ನನ್ನ ಮುಂದಿನ ಎರಡು ದಿನಗಳನ್ನು ಆ ಜೈಲಿನಲ್ಲಿ ಕಳೆದಿದ್ದೇನೆ” ಎಂದು ತಿಳಿಸಿದ್ದಾರೆ.
“ಮುಖೇಶ್ ಮೆನಾರಿಯಾ ಜೀವಂತವಾಗಿದ್ದಾರೆಂದು ಕಂಡುಕೊಂಡ ನಂತರವೂ, ಅವರು ನನ್ನನ್ನು ಇತರೆ ಆರೋಪಗಳ ಮೇಲೆ ಜೈಲಿನಲ್ಲಿರಿಸಲು ಮುಂದಾದರು. ಅಲ್ಲದೇ ತಮ್ಮ ಪ್ರಕರಣವನ್ನು ಮಂಡಿಸಲು ತಾವು ನೇಮಿಸಿಕೊಂಡ ಸುಮಾರು 20 ವಕೀಲರಿಗೆ ವ್ಯಾಪಾರ ಸ್ಪರ್ಧಿಗಳು ಹಣ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಂತಿಮವಾಗಿ ಅವರು ಅಕ್ಟೋಬರ್ 21 ರಂದು ಜಾಮೀನು ಪಡೆದರು.