ಬೆಂಗಳೂರು: ಅಪರಾಧ ಪ್ರಕರಣಗಳ ತನಿಖೆಯಲ್ಲಿ ಲೋಪ ಸೇರಿ ಹಲವು ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ರಾಮಮೂರ್ತಿ ನಗರ ಠಾಣೆಯ ಇನ್ ಸ್ಪೆಕ್ಟರ್ ಸೇರಿದಂತೆ ಆರು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಇನ್ ಸ್ಪೆಕ್ಟರ್ ಮತ್ತು ರಾಜ್ಯಸಭೆ ಇನ್ ಸ್ಪೆಕ್ಟರ್ ಉಮೇಶ್, ಸಹಾಯಕ ಸಬ್ ಇನ್ ಸ್ಪೆಕ್ಟರ್ ಗಳಾದ ಫೈರೋಜ್ ಖಾನ್, ಮಹೇಶ್, ಹೆಡ್ ಕಾನ್ ಸ್ಟೆಬಲ್ ಮಂಜುನಾಥ್, ಕಾನ್ ಸ್ಟೆಬಲ್ ಬಸವರಾಜ್ ಅಮಾನತುಗೊಂಡವರು. ಇವರ ವಿರುದ್ಧ ಎಸಿಪಿ ವರದಿ ಆಧರಿಸಿ ನಗರ ಪೊಲೀಸ್ ಹೆಚ್ಚುವರಿ ಆಯುಕ್ತ ಎನ್. ಸತೀಶ್ ಕುಮಾರ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ಕುರಿತು ದೂರುಗಳು ಸಲ್ಲಿಕೆಯಾಗಿದ್ದು, ಇವುಗಳನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಕೆಜಿ ಹಳ್ಳಿ ಉಪವಿಭಾಗದ ಎಸಿಪಿಗೆ ಸೂಚಿಸಲಾಗಿತ್ತು. ಆಂತರಿಕ ವಿಚಾರಣೆ ನಡೆಸಿ ಎಸಿಪಿ ವರದಿ ಸಲ್ಲಿಸಿದ್ದರು.
ಗಸ್ತು ಸಿಬ್ಬಂದಿ ಮೇಲೆ ಕೆಲವು ರೌಡಿಗಳು ಹಲ್ಲೆ ನಡೆಸಿದ ಬಗ್ಗೆ ದೂರು ನೀಡಿದ್ದರೂ ಕಾನೂನು ಕ್ರಮ ಜರುಗಿಸಿರಲಿಲ್ಲ. ಕೊಲೆ ಪ್ರಕರಣದಲ್ಲಿ ಆರೋಪಿ ಹೆಸರನ್ನು ದೋಷಾರೋಪ ಪಟ್ಟಿಯಿಂದ ಕೈ ಬಿಡಲಾಗಿದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿರಲಿಲ್ಲ. ಡ್ರಗ್ಸ್ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದರೂ, ಕಾನೂನು ಕ್ರಮ ಜರುಗಿಸದೇ ಬಿಟ್ಟು ಕಳಿಸಿದ್ದರು. ಈ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.