
ಬೆಂಗಳೂರು: ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ನಿದ್ದೆಗೆ ಜಾರಿದ ಆರೋಪದ ಮೇಲೆ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಡಿಪೋದಲ್ಲಿ ಭದ್ರತಾ ಕಾರ್ಯನಿರ್ವಹಿಸುತ್ತಿದ್ದ ಕೆಎಸ್‌ಟಿ ಕಾನ್ಸ್ಟೇಬಲ್ ಅವರನ್ನು ಸೇವೆಯಿಂದ ಅಮಾನತುಪಡಿಸಿದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ.
ಕೆ.ಎಸ್.ಟಿ. ಕಾನ್ಸ್ಟೇಬಲ್ ಚಂದ್ರಶೇಖರ್ ಎಂಬುವರು ಕೆಲಸದ ವೇಳೆ ನಿದ್ರೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಸೇವೆಯಿಂದ ಅಮಾನತುಗೊಳಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಅಲ್ಲದೆ, ನಿದ್ದೆ ಮನುಷ್ಯನಿಗೆ ಅತ್ಯಗತ್ಯ. ನಿದ್ದೆ ಮತ್ತು ಕೆಲಸದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಆದರೆ, ಬಿಡುವಿಲ್ಲದೆ 60 ದಿನ ದಿನಕ್ಕೆ 16 ಗಂಟೆ ಕೆಲಸ ಮಾಡಿಸಿದ್ದರಿಂದ ಆತ ಸಹಜವಾಗಿಯೇ ನಿದ್ದೆಗೆ ಜಾರಿರಬಹುದು. ಅಷ್ಟಕ್ಕೇ ಅಮಾನತು ಕ್ರಮ ಸರಿಯಲ್ಲ ಎಂದು ಹೈಕೋರ್ಟ್ ಹೇಳಿದೆ.
ಅಮಾನತು ಆದೇಶ ರದ್ದು ಕೋರಿ ಕಾನ್ಸ್ಟೇಬಲ್ ಚಂದ್ರಶೇಖರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಜೀವನ ಸಮತೋಲನ ಮಾಡಲು ಉದ್ಯೋಗಿಗಳಿಗೆ ಸರಿಯಾದ ನಿದ್ದೆ ಮತ್ತು ಕೆಲಸದ ಅವಶ್ಯಕತೆ ಇದೆ. ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದ ಕೆಲಸ ಮಾಡಲು ಉದ್ಯೋಗಿಯನ್ನು ಕೇಳಿದರೆ ದೇಹವು ಆ ಉದ್ಯೋಗಿಯನ್ನು ನಿದ್ದೆಗೆ ಜಾರುವಂತೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ನಿದ್ದೆ ಕೊರತೆಯಾದಲ್ಲಿ ಯಾವುದೇ ಮನುಷ್ಯ ಎಲ್ಲಿಯಾದರೂ ನಿದ್ದೆಗೆ ಜಾರುತ್ತಾನೆ. ಜೀವನದ ಸಮತೋಲನ ಕಾಯ್ದುಕೊಳ್ಳಲು ಉದ್ಯೋಗಿಗಳಿಗೆ ಕೆಲಸದ ಜೊತೆಗೆ ಸರಿಯಾದ ನಿದ್ದೆಯೂ ಅತ್ಯಗತ್ಯವಾಗಿದೆ ಎಂದು ಹೇಳಲಾಗಿದೆ.