
ದಾವಣಗೆರೆ: ಚೆಕ್ಪೋಸ್ಟ್ ನಲ್ಲಿ ಅಡಿಕೆ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಚಾಲಕರಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಆದೇಶ ಹೊರಡಿಸಿದ್ದಾರೆ.
ಆಜಾದ್ ನಗರ ಪೊಲೀಸ್ ಠಾಣೆಯ ಅಂಕಲಪ್ಪ ಮತ್ತು ಮುಬಾರಕ್ ಅಮಾನತುಗೊಂಡವರು. ಚೆಕ್ ಪೋಸ್ಟ್ ಕರ್ತವ್ಯದಲ್ಲಿದ್ದ ಸಿಬ್ಬಂದಿ ಬೇತೂರು ಕಡೆಯಿಂದ ದಾವಣಗೆರೆ ಮಾರ್ಗವಾಗಿ ಬರುತ್ತಿದ್ದ ಅಡಿಕೆ ತುಂಬಿದ ಟ್ರಾಕ್ಟರ್ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಬಂದಿತ್ತು. ಇವರ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಆಜಾದ್ ನಗರ ಪೊಲೀಸ್ ನಿರೀಕ್ಷಕ ಅಶ್ವಿನ್ ಕುಮಾರ್ ನಗರ ಉಪವಿಭಾಗ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಅವರಿಗೆ ವರದಿ ನೀಡಿದ್ದರು.
ಈ ವರದಿ ಆಧರಿಸಿ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲು ಶಿಫಾರಸು ಮಾಡಿದ ಹಿನ್ನಲೆಯಲ್ಲಿ ಮುಂದಿನ ಇಲಾಖೆ ಶಿಸ್ತು ಕ್ರಮ ಬಾರಿ ಇರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಇಬ್ಬರನ್ನು ಸೇವೆಯಿಂದ ಅಮಾನತು ಮಾಡಿ ಎಸ್ಪಿ ಉಮಾ ಪ್ರಶಾಂತ್ ಆದೇಶಿಸಿದ್ದಾರೆ.