ಯುಕೆಯ ಕ್ಲೀವ್‌ಲ್ಯಾಂಡ್ ಪೊಲೀಸ್ ಅಧಿಕಾರಿಗಳು ಕಾರಿನೊಳಗಿದ್ದ ಮಗುವನ್ನು ರಕ್ಷಿಸಲು ಹೋಗಿ ಮುಜುಗರಕ್ಕೊಳಗಾಗಿದ್ದಾರೆ. ಕಾರಿನಲ್ಲಿ ಪುಟ್ಟ ಮಗು ಲಾಕ್ ಆಗಿದೆ ಎಂದು ಕರೆ ಬಂದಮೇಲೆ ಪೊಲೀಸ್ ಅಧಿಕಾರಿಗಳು ಕಾರ್ ನಿಂತಿದ್ದ ಸ್ಥಳಕ್ಕೆ ಆಗಮಿಸಿದ್ದಾರೆ.
ಮಹಿಳೆಯ ಕಾರಿನಿಂದ ಮಗುವನ್ನು ರಕ್ಷಿಸಬೇಕು ಎಂದು ಕಾರಿನ ಕಿಟಕಿ ಒಡೆದು ತೆರೆದಾಗ, ಪೊಲೀಸ್ ಅಧಿಕಾರಿಗಳಿಗೆ ನಿಜವಾದ ಮಗುವಿನ ಬದಲು ಸೀಟಿನಲ್ಲಿ ಥೇಟ್ ಮಗುವಿನಂತೆ ಇರುವ ಗೊಂಬೆ ಸಿಕ್ಕಿದೆ.
ಕ್ರಿಸ್ಮಸ್ ಪ್ರಯುಕ್ತವಾಗಿ ಕಾರಿನ ಮಾಲೀಕರ ಮಗಳಿಗೆ ಈ ಗೊಂಬೆಯನ್ನ ಉಡುಗೊರೆಯಾಗಿ ನೀಡಲಾಗಿತ್ತು. ಕಾರ್ ಓನರ್ ಆಮಿ ಮೆಕ್‌ಕ್ವಿಲೆನ್ ಅವರು ತಮ್ಮ ಮಗಳು ಡಾರ್ಸಿಯೊಂದಿಗೆ ಶಾಪಿಂಗ್‌ಗೆ, ಗೊಂಬೆಯನ್ನ ಕೈಯ್ಯಲ್ಲಿಡಿದುಕೊಂಡು ಹೋಗುವ ಬದಲು ಅದನ್ನ ಕಾರಲ್ಲೆ ಇರಿಸಿ ಹೋಗಿದ್ದರು. ಶಾಪಿಂಗ್ ಮುಗಿಸಿ ಕಾರ್ ನಿಲ್ಲಿಸಿದ್ದ ಜಾಗಕ್ಕೆ ಬಂದ ಅಮ್ಮ-ಮಗಳಿಗೆ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಅವರ ಸುತ್ತ ನಿಂತಿದ್ದ ಜನಸಮೂಹ ನೋಡಿ ಆಘಾತವಾಗಿದೆ. ಗೊಂಬೆಗೆ ಬಟ್ಟೆ ಖರೀದಿಸಲು ನಾನು ಡಾರ್ಸಿ ಹೋಗಿದ್ದೆವು, ಡಾರ್ಸಿ ಗೊಂಬೆಯನ್ನು ಬೂಸ್ಟರ್ ಸೀಟಿನಲ್ಲಿ ಇರಿಸಿ ಅದರ ಸುತ್ತಲೂ ಸೀಟ್ ಬೆಲ್ಟ್ ಹಾಕಿದ್ದರಿಂದ ಈ ಗೊಂದಲ ಸಂಭವಿಸಿದೆ ಎಂದು ಆಮಿ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳಿಗೆ, ಕಾರ್ ಒಂದರಲ್ಲಿ ಪುಟ್ಟ ಮಗು ಸಿಲುಕಿಕೊಂಡಿದೆ, ಅದು ಹೊರಬರಲು ಪ್ರಯತ್ನಿಸಿದ್ದನ್ನ ನಾವು ನೋಡಿದ್ದೇವೆ ಎಂದು ಕರೆ ಬಂದಿದ್ದರಿಂದ ರಕ್ಷಣೆಗೆ ನಾವು ಧಾವಿಸಿ ಬಂದೆವು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ, ಕ್ಲೀವ್ ಲ್ಯಾಂಡ್ ಪೊಲೀಸರು ಆಮಿಯ ಕಿಟಕಿಯನ್ನು ದುರಸ್ತಿ ಮಾಡಲು 264 ಪೌಂಡ್ ಪಾವತಿಸಲು ಒಪ್ಪಿಕೊಂಡಿದ್ದಾರೆ. ಈ ಘಟನೆ ಕೇವಲ ಉತ್ತಮ ಉದ್ದೇಶದಿಂದ ನಡೆದಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.