ಶಿವಮೊಗ್ಗ: ಪೊಲೀಸರು ಜನಸಾಮಾನ್ಯರ ಮೇಲೆ ದರ್ಪ ತೋರುತ್ತಾರೆ. ಗದರಿಸುತ್ತಾರೆ ಎನ್ನುವ ಸಾಮಾನ್ಯ ಅಭಿಪ್ರಾಯಗಳಿವೆ. ಆದರೆ, ಇದಕ್ಕೆ ಅಪವಾದವೆನ್ನುವಂತೆ ಹೆಚ್ಚಿನ ಪೊಲೀಸರು ಜನರಿಗೆ ಸ್ಪಂದಿಸುತ್ತಾರೆ. ಮಾನವೀಯತೆ ತೋರಿ ಜನಸ್ನೇಹಿಯಾಗಿದ್ದಾರೆ.
ಇಂತಹುದೇ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ. ಅತ್ಯಂತ ಜನನಿಬಿಡ ಮತ್ತು ವಾಹನ ದಟ್ಟಣೆಯ ಅಮೀರ್ ಅಹ್ಮದ್ ವೃತ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರೊಬ್ಬರು ತೋರಿದ ಮಾನವೀಯತೆ ಭಾರಿ ಪ್ರಶಂಸೆಗೆ ಪಾತ್ರವಾಗಿದೆ.
ಹಿರಿಯರೊಬ್ಬರು ಸರಕು ತುಂಬಿದ ಗಾಡಿಯನ್ನು ಎಳೆದುಕೊಂಡು ಹೋಗಲು ಪರದಾಡುತ್ತಿರುವಾಗ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ತಾವು ಕೂಡ ಗಾಡಿಯನ್ನು ಎಳೆದು ವೃದ್ಧನಿಗೆ ನೆರವಾಗಿದ್ದಾರೆ.
ಶಿವಮೊಗ್ಗ ಪಶ್ಚಿಮ ಸಂಚಾರ ಠಾಣೆಯ ಪೊಲೀಸ್ ರಮೇಶ್ ಅವರು ನಗರದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ವೃದ್ಧ ಗಾಡಿ ಎಳೆಯಲು ಕಷ್ಟಪಡುತ್ತಿರುವುದನ್ನು ಗಮನಿಸಿ ತಾವೂ ಕೈಹಾಕಿ ಗಾಡಿ ಎಳೆದುಕೊಂಡು ಹೋಗಿದ್ದಾರೆ. ಇದನ್ನು ವಿಡಿಯೋ ಮಾಡಿಕೊಂಡವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ರಮೇಶ್ ಅವರ ಮಾನವೀಯ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.