ಬೆಂಗಳೂರು: ಪೊಲೀಸ್ ನೇಮಕಾತಿ ವಿಭಾಗದ ಹೆಸರಲ್ಲಿ ನಕಲಿ ವೆಬ್ಸೈಟ್ ಸೃಷ್ಟಿಸಿ ಅಭ್ಯರ್ಥಿಗಳನ್ನು ವಂಚಿಸಲಾಗಿದ್ದು, ಈ ಸಂಬಂಧ ಕೇಂದ್ರ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಇಲಾಖೆಯಲ್ಲಿ 25 ತಾಂತ್ರಿಕ ಹುದ್ದೆಗಳು ಖಾಲಿ ಇದ್ದು, ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಾಹೀರಾತು ನೀಡಿದ್ದ ಆರೋಪಿಗಳು ನಕಲಿ ಜಾಲತಾಣದ ಲಿಂಕ್ ಹರಿಬಿಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಜಾಲತಾಣ ನಿಷ್ಕ್ರಿಯಗೊಳಿಸಿದ್ದಾರೆ.
ಹೊರದೇಶವೊಂದರ ವಿಳಾಸ ಬಳಸಿಕೊಂಡು ನಕಲಿ ವೆಬ್ ಸೈಟ್ ಸೃಷ್ಟಿಸಲಾಗಿದೆ. www.ksprecruitment.co.in ಜಾಲತಾಣದಲ್ಲಿ ತಾಂತ್ರಿಕ ಹುದ್ದೆಗಳ ನೇಮಕಾತಿ ಆಯ್ಕೆ ನಮೂದಿಸಿದ್ದು, ಲಿಂಕ್ ತೆರೆಯುವ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಿ ಪ್ರತಿ ಅರ್ಜಿಗೆ 2 ಸಾವಿರ ರೂಪಾಯಿ ಪಾವತಿಸುವಂತೆ ಸೂಚನೆ ನೀಡಲಾಗಿತ್ತು. ಕೆಲವರು ಅರ್ಜಿ ಶುಲ್ಕದ ಬಗ್ಗೆ ಅನುಮಾನಗೊಂಡು ಹಣ ಪಾವತಿ ಮಾಡಿಲ್ಲ. ಜಾಲತಾಣಕ್ಕೆ ಲಿಂಕ್ ಮಾಡಲಾಗಿದ್ದ ಮೊಬೈಲ್ ನಂಬರ್ ಆಧರಿಸಿ ವ್ಯಕ್ತಿಯೊಬ್ಬನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆದರೆ ಆತನ ಹೆಸರಿನಲ್ಲಿ ಆರೋಪಿಗಳು ಸಿಮ್ ಕಾರ್ಡ್ ಖರೀದಿಸಿ ಕೃತ್ಯವೆಸಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ತನಿಖೆ ಮುಂದುವರೆದಿದ್ದು ಶೀಘ್ರವೇ ಆರೋಪಿಸಿ ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.