ಬೆಳಗಾವಿ: ರಾಜ್ಯಾದ್ಯಂತ 3,533 ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾನುವಾರ ಲಿಖಿತ ಪರೀಕ್ಷೆ ನಡೆಸಲಾಗಿದೆ.
ಬೆಳಗಾವಿಯಲ್ಲಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ 14 ಮಂದಿಯನ್ನು ಬಂಧಿಸಲಾಗಿದೆ. ಬ್ಲೂಟೂತ್ ಸಾಧನ ಬಳಸಿಕೊಂಡು ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಇಬ್ಬರು ಪರೀಕ್ಷಾರ್ಥಿಗಳು ಮತ್ತು ಇದಕ್ಕಾಗಿ ಸಹಾಯ ಮಾಡಿದ 12 ಮಂದಿ ಸೇರಿದಂತೆ 14 ಮಂದಿಯನ್ನು ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಗೋಕಾಕ್ ತಾಲೂಕಿನ ಮಸಗುಪ್ಪಿ ಲಕ್ಷ್ಮಣ, ಮೂಡಲಗಿ ತಾಲೂಕಿನ ತಿಗಡಿ ಗ್ರಾಮದ ಸರಸ್ವತಿ ಪೂಜಾರಿ ಬ್ಲೂಟೂತ್ ಸಾಧನದ ಮೂಲಕ ನಕಲು ಮಾಡುವಾಗ ಸಿಕ್ಕಿಬಿದ್ದಿದ್ದಾರೆ.
ರಾಮತೀರ್ಥ ಪಟ್ಟಣದ ಕೊಠಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನಕಲು ಮಾಡಲು ಸಹಾಯ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಿಢೀರ್ ದಾಳಿ ನಡೆಸಿ 12 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಿಂದ 9 ಮಾಸ್ಟರ್ ಕಾರ್ಡ್, 19 ಬ್ಲೂಟೂತ್, 33 ಮೊಬೈಲ್, 1 ಲ್ಯಾಪ್ಟಾಪ್ ಹಾಗೂ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಹಿಂದೆ ದೊಡ್ಡ ಜಾಲವೇ ಇರುವ ಶಂಕೆ ಇದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಹೇಳಲಾಗಿದೆ.