ಚಿಕ್ಕಮಗಳೂರು: ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದ ವಕೀಲರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆ ಎದುರು ಪೊಲೀಸರು ಸಮವಸ್ತ್ರದಲ್ಲಿಯೇ ಶನಿವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ಬೆಳಗಿನ ಜಾವದವರೆಗೂ ಪೊಲೀಸರ ಪ್ರತಿಭಟನೆ ಮುಂದುವರೆದಿದೆ. ಚಿಕ್ಕಮಗಳೂರು ನಗರ ಹಾಗೂ ಸುತ್ತಮುತ್ತಲಿನ ಐದು ಪೊಲೀಸ್ ಠಾಣೆಯ 50ಕ್ಕೂ ಅಧಿಕ ಪೊಲೀಸರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಮೆರವಣಿಗೆ ಮೂಲಕ ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತಕ್ಕೆ ತೆರಳಿದ ಪೊಲೀಸರು ರಸ್ತೆ ತಡೆ ನಡೆಸಿ ವಕೀಲರ ವಿರುದ್ಧ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಪಶ್ಚಿಮ ವಲಯ ಐಜಿ ಚಂದ್ರ ಗುಪ್ತ, ಎಸ್.ಪಿ. ಡಾ. ವಿಕ್ರಂ ಅಮಟೆ ಆಗಮಿಸಿ ಮನವಿ ಮಾಡಿದರೂ ಪೊಲೀಸರು ಪ್ರತಿಭಟನೆ ಮುಂದುವರೆಸಿದ್ದಾರೆ.
ಪೊಲೀಸರ ಪ್ರತಿಭಟನೆಗೆ ಅವರ ಕುಟುಂಬದವರು ಸಾಥ್ ನೀಡಿದ್ದಾರೆ. ವಕೀಲರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ಕೈಗೊಳ್ಳಲಾಗಿದೆ.