ಮಂಗಳೂರು: ಪೊಲೀಸ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ವ್ಯಕ್ತಿಯೊಬ್ಬರಿಂದ 50 ಲಕ್ಷ ರೂಪಾಯಿ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಅ. 11 ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ ತನ್ನನ್ನು ಮಹಾರಾಷ್ಟ್ರದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿನಯ್ ಕುಮಾರ್ ಎಂದು ಪರಿಚಯಿಸಿಕೊಂಡಿದ್ದಾನೆ. ಕಿರುಕುಳದ ಕುರಿತಾಗಿ ನಿಮ್ಮ ಮೇಲೆ ದೂರು ದಾಖಲಾಗಿದ್ದು, ಠಾಣೆಗೆ ಬರುವಂತೆ ತಿಳಿಸಿದ್ದಾನೆ. ತಾನು ಸಿಬಿಐನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದು, ನರೇಶ್ ಗೋಯಲ್ ಎಂಬುವರ ಮನೆಯಲ್ಲಿ ಜಪ್ತಿ ಮಾಡುವಾಗ ನಿಮ್ಮ ಎಟಿಎಂ ಕಾರ್ಡ್ ಸಿಕ್ಕಿದೆ. ಅದರಲ್ಲಿ 20 ಜನರು ಎರಡು ಕೋಟಿ ರೂಪಾಯಿಗಳನ್ನು ನಿಮ್ಮ ಮುಂಬೈ ಖಾತೆಯಲ್ಲಿ ಹೂಡಿಕೆ ಮಾಡಿದ್ದಾರೆ. ಮನಿ ಲ್ಯಾಂಡರಿಂಗ್ ಪ್ರಕರಣ ನಿಮ್ಮ ಮೇಲೆ ದಾಖಲಾಗಿದೆ. ನಿಮ್ಮನ್ನು ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾನೆ.
ನಿಮ್ಮ ದಾಖಲಾತಿಗಳನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಬೇಕಿದೆ. ನೀವು ಬರಲು ಸಾಧ್ಯವಾಗದಿದ್ದಲ್ಲಿ ಆನ್ಲೈನ್ ಮೂಲಕ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಮರುದಿನ ಕರೆ ಮಾಡಿದ ಆಕಾಶ್ ಕುಲ್ಲಹಾರಿ ಎಂಬಾತ ಬ್ಯಾಂಕ್ ಖಾತೆ ವಿವರಗಳನ್ನು ಕೇಳಿದ್ದಾನೆ. ಎಲ್ಲಾ ವಿವರಗಳನ್ನು ವ್ಯಕ್ತಿ ನೀಡಿದ್ದು, ಕರೆ ಮಾಡಿ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ಆರ್ಬಿಐಗೆ ವರ್ಗಾಯಿಸಬೇಕಿದೆ. ಹಾಗೆ ಮಾಡಿದರೆ ನಿಮ್ಮ ಮೇಲೆ ಸಂದೇಹ ಬರುತ್ತದೆ. ಹಾಗಾಗಿ ಶಿವಾನಿ ಎಂಟರ್ಪ್ರೈಸಸ್ ಖಾತೆಗೆ ವರ್ಗಾವಣೆ ಮಾಡಿ ಎಂದು ಬ್ಯಾಂಕ್ ಖಾತೆಯ ಸಂಖ್ಯೆ ನೀಡಿದ್ದಾನೆ.
ಅಂತೆಯೇ ಅಕ್ಟೋಬರ್ 19ರಂದು ವಂಚನೆಗೊಳಗಾದ ವ್ಯಕ್ತಿ 50 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಆತ ವಾಟ್ಸಾಪ್ ಮೂಲಕ ರಸೀದಿ ಕಳಿಸಿದ್ದು, ಮೂರು ದಿನಗಳ ನಂತರ ಮರುಪಾವತಿ ಮಾಡುವುದಾಗಿ ತಿಳಿಸಿದ್ದಾನೆ. ಬಳಿಕ ಹಣ ವಾಪಸ್ ಮಾಡಲು ಮತ್ತಷ್ಟು ಹಣ ಕೇಳಿದ್ದು, ವಂಚನೆಗೊಳಗಾಗಿರುವುದನ್ನು ತಿಳಿದ ವ್ಯಕ್ತಿ ಕದ್ರಿ ಠಾಣೆಗೆ ದೂರು ನೀಡಿದ್ದಾರೆ.