ಪಾಟ್ನಾ: ಬಿಹಾರದ ಸಮಸ್ತಿಪುರದಲ್ಲಿ ಜಾನುವಾರು ಕಳ್ಳಸಾಗಾಣಿಕೆದಾರರು ಗುಂಡಿಕ್ಕಿ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ್ದಾರೆ.
ಬಿಜೆಪಿ ನಾಯಕರ ನಿಯೋಗವೊಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾಗಿ ಹೆಚ್ಚುತ್ತಿರುವ ಅಪರಾಧಗಳ ತಡೆಗೆ ಒತ್ತಾಯಿಸಿದ ಒಂದು ದಿನದ ನಂತರ, ಬಿಹಾರದ ಸಮಸ್ತಿಪುರ್ ಜಿಲ್ಲೆಯಲ್ಲಿ ಮಂಗಳವಾರ ದನ ಕಳ್ಳಸಾಗಣೆದಾರು ಪೊಲೀಸ್ ಅಧಿಕಾರಿಯೊಬ್ಬರನ್ನು ಗುಂಡಿಕ್ಕಿ ಕೊಂದಿದ್ದಾರೆ.
ಮೃತ ಪೊಲೀಸ್ ಅಧಿಕಾರಿ ನಂದ್ ಕಿಶೋರ್ ಯಾದವ್ ಅವರು ದಲ್ಸಿಂಗ್‌ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಮೋಹನ್‌ಪುರ ಪೊಲೀಸ್ ಹೊರಠಾಣೆಯಲ್ಲಿ ನಿಯೋಜನೆಗೊಂಡಿದ್ದರು. ಈ ಪ್ರದೇಶದಲ್ಲಿ ಜಾನುವಾರು ಕಳ್ಳತನದಲ್ಲಿ ತೊಡಗಿದ್ದ ಮೂವರು ಶಂಕಿತರನ್ನು ವಶಕ್ಕೆ ಪಡೆದ ನಂತರ ಎಸ್‌ಹೆಚ್‌ಒ ದಾಳಿ ನಡೆಸಲು ಹೋದಾಗ ಈ ಘಟನೆ ನಡೆದಿದೆ.
ತನಿಖೆ ವೇಳೆ ದನಗಳ್ಳರು ಪೊಲೀಸ್ ಅಧಿಕಾರಿಯತ್ತ ಗುಂಡು ಹಾರಿಸಿದ್ದಾರೆ. ಅವರನ್ನು ತಕ್ಷಣವೇ ದಲ್ಸಿಂಗ್ಸರಾಯ್ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಅವರನ್ನು ಪಾಟ್ನಾದ ಇಂದಿರಾ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (IGIMS) ದಾಖಲಿಸಿದ್ದು, ಚಿಕಿತ್ಸೆ ವೇಳೆ ಯಾದವ್ ಸಾವನ್ನಪ್ಪಿದ್ದಾರೆ.
ಜಿಲ್ಲಾ ಪೊಲೀಸ್ ಲೈನ್ ನಲ್ಲಿ ಗೌರವ ವಂದನೆ ಸಲ್ಲಿಸಿದ ಬಳಿಕ ಮೃತ ಪೋಲೀಸರ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಸಮಸ್ತಿಪುರ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ವಿಜಯ್ ಕುಮಾರ್ ತಿವಾರಿ ತಿಳಿಸಿದ್ದಾರೆ.