
ನಾವು ತೋರುವ ದಯೆಯ ಸಣ್ಣ ಕಾರ್ಯಗಳು ಜನರ ಜೀವನದ ಮೇಲೆ ಪರಿಣಾಮ ಬೀರಬಹುದು ಮತ್ತು ಸಂತೋಷವನ್ನು ಹರಡಬಹುದು. ನೆಟ್ಟಿಗರು ಯಾವಾಗಲೂ ಇಂತಹ ಪರೋಪಕಾರಿ ಕಾರ್ಯಗಳನ್ನು ಶ್ಲಾಘಿಸುತ್ತಾರೆ.
ಅಂಥದ್ದೊಂದು ವಿಡಿಯೋ ಮೆಚ್ಚುಗೆ ಗಳಿಸಿದೆ. ಪೊಲೀಸ್ ಅಧಿಕಾರಿಯೊಬ್ಬರು ಸೀಬೆಹಣ್ಣು ಮಾರುತ್ತಿರುವ ಹಿರಿಯ ಮಹಿಳೆಗೆ ಸಹಾಯ ಮಾಡಿದ ವಿಡಿಯೋ ಇಂಟರ್ನೆಟ್ ನಲ್ಲಿ ಹರಿದಾಡ್ತಿದೆ.
ವಯಸ್ಸಾದ ಮಹಿಳೆ ಸೀಬೆಹಣ್ಣನ್ನು ಮಾರಲು ಬಿರು ಬಿಸಿಲಿನಲ್ಲಿ ಕುಳಿತಿರುವುದನ್ನು ವೀಡಿಯೊ ತೋರಿಸುತ್ತದೆ. ಪ್ರತಿ ಕೆ.ಜಿ.ಗೆ 20 ರೂ.ನಂತೆ ಹಣ್ಣನ್ನ ಮಾರುತ್ತಿದ್ದು, ಇನ್ನೂ ಎರಡು ಕೆಜಿ ಹಣ್ಣು ಮಾರಾಟವಾಗದೇ ಇತ್ತು.
ಈ ವೇಳೆ ಪೊಲೀಸ್ ಅಧಿಕಾರಿ ಬಿಸಿಲಿನಲ್ಲಿ ಆಕೆ ಕೂತು ಹಣ್ಣು ಮಾರುತ್ತಿದ್ದನ್ನು ಗಮನಿಸಿ ಆಕೆಯ ಬಳಿಯಿದ್ದ ಎಲ್ಲ ಹಣ್ಣುಗಳನ್ನು ಕೊಂಡರೆ ನೀವು ಮನೆಗೆ ಹೋಗುತ್ತೀರಾ ಎಂದು ಮಹಿಳೆಗೆ ಕೇಳುತ್ತಾರೆ.
ಅದಕ್ಕೊಪ್ಪಿದ ಮಹಿಳೆ ತನ್ನ ಹೆಸರು ಫುಲ್ರಾಣಿ ಎಂದು ಹೇಳುತ್ತಾರೆ. ಹಣ್ಣನ್ನು ಪೊಲೀಸ್ ಅಧಿಕಾರಿಗೆ ನೀಡುವಾಗ ಪೊಲೀಸ್ ಅಧಿಕಾರಿಯು ಅವರಿಗೆ 100 ರೂ.ಗಳನ್ನು ನೀಡುತ್ತಾರೆ. ಮಹಿಳೆ ಈ ವೇಳೆ ಉಳಿದ ಬಾಕಿ ಹಣವನ್ನು ವಾಪಸ್ ನೀಡಲು ಮುಂದಾದಾಗ ಪೊಲೀಸ್ ಅಧಿಕಾರಿ ನಿರಾಕರಿಸಿದ್ದಾರೆ.
ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಅವರು ಮಹಿಳೆಗೆ ಸೂಚಿಸುತ್ತಾರೆ. ಪೋಲೀಸರ ನಡೆಗೆ ಹೃದಯ ತುಂಬಿಬಂದಂತೆ ಮಹಿಳೆಯು ಅವರಿಗೆ ಆಶೀರ್ವಾದವನ್ನು ನೀಡುತ್ತಾರೆ. 1:23 ನಿಮಿಷಗಳ ವೀಡಿಯೋವನ್ನು ಟ್ವಿಟ್ಟರ್ ಬಳಕೆದಾರ ಬುಂದೇಲಿ ಬೌಚರ್ ಹಂಚಿಕೊಂಡಿದ್ದಾರೆ.