ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ ಯುವಕ ಖಾಸಗಿ ಫೋಟೋ ತೋರಿಸಿ ಬ್ಲಾಕ್ಮೇಲ್ ಮಾಡುತ್ತಿರುವುದಾಗಿ ಮಹಿಳಾ ಟೆಕ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾರತ್ ಹಳ್ಳಿ ನಿವಾಸಿಯಾಗಿರುವ ಯುವತಿ ದೂರು ನೀಡಿದ್ದು, ಪೂರ್ವ ವಿಭಾಗದ ಮಹಿಳಾ ಠಾಣೆ ಪೊಲೀಸರು ವೈಟ್ ಫೀಲ್ಡ್ ನಿವಾಸಿಯಾಗಿರುವ ಯುವಕನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಮೂಲಕ ಪರಿಚಯವಾಗಿದ್ದ ಯುವಕ ಮದುವೆಯಾಗುವುದಾಗಿ ನಂಬಿಸಿ ಸಂಬಂಧ ಬೆಳೆಸಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಯುವತಿ ದೂರು ನೀಡಿದ್ದಾಳೆ.
ತನ್ನ ಮನೆಯಲ್ಲಿ ಪೋಷಕರು ಮದುವೆಗೆ ಒಪ್ಪಿಗೆ ನೀಡುತ್ತಿಲ್ಲ. ವಿದೇಶಕ್ಕೆ ಹೋಗಿ ಮದುವೆಯಾಗೋಣ ಎಂದು ನಂಬಿಸಿದ್ದ ಆರೋಪಿ ಏಪ್ರಿಲ್ 24 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿಯನ್ನು ಕರೆಸಿಕೊಂಡು ಆಕೆಯ ಇಚ್ಚೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ. ದೈಹಿಕ ಸಂಪರ್ಕ ಬೆಳೆಸಲು ಒಪ್ಪದಿದ್ದರೆ ಹಿಂದೆ ತೆಗೆಸಿಕೊಂಡ ಫೋಟೋವನ್ನು ಪರಿಚಿತರಿಗೆ ತೋರಿಸುವುದಾಗಿ ಬೆದರಿಸುತ್ತಿದ್ದ. ಇದರಿಂದ ಆತಂಕಗೊಂಡ ಯುವತಿ ಹೇಳಿದಂತೆ ಕೇಳಿದ್ದಾಳೆ.
ಕೊನೆಗೆ ಆಕೆ ಗರ್ಭಿಣಿಯಾಗಿರುವುದು ಗೊತ್ತಾಗಿ ಮದುವೆಯಾಗಲು ಮನವಿ ಮಾಡಿದ್ದಾಳೆ. ಗರ್ಭಿಣಿಯಾದಂತಹ ಸಂದರ್ಭದಲ್ಲಿ ಮದುವೆಯಾದಲ್ಲಿ ಸಂಬಂಧಿಕರ ಮುಂದೆ ಮುಜುಗರವಾಗುತ್ತದೆ. ಗರ್ಭಪಾತ ಮಾಡಿಸಿಕೊಂಡರೆ ಮದುವೆಯಾಗುವುದಾಗಿ ಯುವಕ ನಂಬಿಸಿದ್ದಾನೆ. ಒತ್ತಾಯದಿಂದ ಗರ್ಭಪಾತ ಮಾಡಿಸಿದ್ದಲ್ಲದೇ ಗರ್ಭಪಾತಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾಶಪಡಿಸಿದ್ದಾನೆ. ಅಕ್ಟೋಬರ್ 24 ರಂದು ಮನೆಯಿಂದ ಹೊರಹಾಕಿದ್ದಾನೆ ಎಂದು ಹೇಳಲಾಗಿದೆ.