ಬೆಂಗಳೂರು: ಪೊಲೀಸರ ವೇಷ ಧರಿಸಿ ಬಂದ ದುಷ್ಕರ್ಮಿಗಳು ಗುಜರಿ ವ್ಯಾಪಾರಿಯನ್ನು ಅಪಹರಿಸಿದ ಘಟನೆ ನಡೆದಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲೂರಿನ ಮೆಟ್ಟಗಾನಹಳ್ಳಿ ಡಂಪಿಂಗ್ ಯಾರ್ಡ್ ಬಳಿ ಯಲಹಂಕ ರೌಡಿಶೀಟರ್ ಮುಜಾಮಿಲ್ ಅಲಿಯಾಸ್ ಮುಜ್ಜು ಹಫ್ತಾ ವಸೂಲಿಗೆ ಮುಂದಾಗಿದ್ದ. ಚಿಂದಿ ಆಯಲು ಹಫ್ತಾ ಕೊಡುವಂತೆ ಬೇಡಿಕೆ ಇಟ್ಟಿದ್ದ. ಪ್ರತಿ ತಿಂಗಳು ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದು, ಗುಜರಿ ವ್ಯಾಪಾರಿ ಹಣ ಕೊಡಲು ನಿರಾಕರಿಸಿದಾಗ ಅವರನ್ನು ಅಪಹರಿಸಿದ್ದಾನೆ.
ಮಧ್ಯರಾತ್ರಿ ಕಾರ್ ನಲ್ಲಿ ಬಂದಿದ್ದ ಆರೋಪಿಗಳು ಪೊಲೀಸರು ಎಂದು ಹೇಳಿ ಗುಜರಿ ವ್ಯಾಪಾರಿಯನ್ನು ಅಪಹರಿಸಿದ್ದಾರೆ. ಅವರಿಂದ ತಪ್ಪಿಸಿಕೊಂಡು ಬಂದ ಗುಜರಿ ವ್ಯಾಪಾರಿ ಓಡಲು ಶುರು ಮಾಡಿದ್ದಾರೆ. ಅಪಹರಣಕಾರರು ಅವರನ್ನು ಹಿಡಿಯಲು ಹಿಂದೆ ಓಡಿದ್ದು, ಮಧ್ಯರಾತ್ರಿ ಇವರನ್ನು ಕಂಡು ಅನುಮಾನಗೊಂಡ ಗಸ್ತಿನಲ್ಲಿದ್ದ ಪೊಲೀಸರು ಹಿಡಿದು ವಿಚಾರಣೆ ನಡೆಸಿದಾಗ ನಕಲಿ ಪೊಲೀಸರು ಅಪಹರಣ ಮಾಡಿರುವುದು ಗೊತ್ತಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜಾಮಿಲ್, ಸೈಯದ್ ಶಿಫಾಸ್, ಯೂಸೂಫ್ ಅವರನ್ನು ಬಂಧಿಸಿದ ಅಮೃತಹಳ್ಳಿ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.