ಬೆಂಗಳೂರು: ಹುತಾತ್ಮ ಪೊಲೀಸ್ ಸಿಬ್ಬಂದಿಯ ಗುಂಪು ವಿಮಾ ಮೊತ್ತ 20 ಲಕ್ಷ ರೂ.ನಿಂದ 50 ಲಕ್ಷ ರೂ.ಗೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪೊಲೀಸ್ ವ್ಯವಸ್ಥೆ ರಾಜ್ಯದ ಮತ್ತು ಸರ್ಕಾರದ ಘನತೆಯನ್ನು ಹೆಚ್ಚಿಸುವಂತೆ ಕೆಲಸ ಮಾಡುತ್ತದೆ. ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆಗೆ ನೇರ ಸಂಬಂಧವಿದೆ. ಯಾವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿರುತ್ತದೋ ಅಲ್ಲಿಗೆ ಬಂಡವಾಳ ಹರಿದು ಬರುತ್ತದೆ, ಇದರಿಂದ ಉದ್ಯೋಗ ಸೃಜನೆಯಾಗಿ ಅಭಿವೃದ್ಧಿಯು ವೇಗ ಪಡೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಸಮಾಜ ರಕ್ಷಣೆಯ ಗುರುತರ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ಹಗಲು, ರಾತ್ರಿಯೆನ್ನದೆ ದುಡಿಯುವ ಪೊಲೀಸರ ಸೇವೆಯನ್ನು ಗುರುತಿಸಿ, ಗೌರವಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿ ಸಾರ್ವಜನಿಕರ ಆಸ್ತಿಪಾಸ್ತಿ, ಪ್ರಾಣರಕ್ಷಣೆ ಹೀಗೆ ಕರ್ತವ್ಯ ಪಾಲನೆಯ ವೇಳೆ ಹುತಾತ್ಮರಾಗುವ ಪೊಲೀಸ್ ಸಿಬ್ಬಂದಿಯ ಗುಂಪು ವಿಮಾ ಮೊತ್ತವನ್ನು 20 ಲಕ್ಷ ರೂ.ನಿಂದ 50 ಲಕ್ಷ ರೂ.ಗೆ ಏರಿಕೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮಾಹಿತಿ ನೀಡಿದ್ದಾರೆ.