ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧವೇ ಎಫ್ಐಆರ್ ದಾಖಲಾಗಿರುವ ಘಟನೆ ನಡೆದಿದೆ.
ಇನ್ಸ್ ಪೆಕ್ಟರ್ ಹಿತೇಂದ್ರ ಎಂ.ಎಸ್ ವಿರುದ್ಧ ಬೆಂಗಳೂರಿನ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಹಿಂದೆ ಜೆ.ಪಿ.ನಗರ ಠಾಣೆಯಲ್ಲಿಯೇ ಇನ್ಸ್ ಪೆಕ್ಟರ್ ಆಗಿದ್ದ ಹಿತೇಂದ್ರ, ಕೆಲ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮಾಲನ್ನು ವಾಪಾಸ್ ನೀಡಿರಲಿಲ್ಲ. ಅಲ್ಲದೇ ಹಿಂದಿನ ಇನ್ಸ್ ಪೆಕ್ಟರ್ ಹಸ್ತಾಂತರಿಸಿದ್ದ ಮಾಲು ಸಹ ಹಾಜರುಪಡಿಸಿರಲಿಲ್ಲ.
ಜಪ್ತಿ ಮಾಡಿದ್ದ ವಸ್ತುಗಳನ್ನು ವಾಪಸ್ ನೀಡುವಂತೆ ಹಲವು ಬಾರಿ ದಕ್ಷಿಣ ವಿಭಾಗದ ಡಿಸಿಪಿ ಜ್ಞಾಪನಾ ಪತ್ರ ನೀಡಿದ್ದರೂ ಉತ್ತರ ನೀಡಿರಲಿಲ್ಲ. ಜಪ್ತಿ ಮಾಡಿದ್ದ ಮಾಲು ಹಿಂತಿರುಗಿಸದೇ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಹಿತೇಂದ್ರ ವಿರುದ್ಧ ಎಫ್ಐಆರ್ ದಾಖಲಾಗಿದೆ.